ವಾಡಿ: ಲಾಕ್‌ಡೌನ್ ಸಂಕಷ್ಟದಲ್ಲಿರುವ ೮೪ ಜನ ಮಂಗಳಮುಖಿಯರಿಗೆ ಹಾಗೂ ೧೦೦ ಜನ ಲೈಂಗಿಕ ಅಲ್ಪಸಂಖ್ಯಾತ ಧಮನಿತ ಮಹಿಳೆಯರು ಮತ್ತು ದೇವದಾಸಿಯರಿಗೆ ಕಲಬುರಗಿ ಸ್ನೇಹ ಸಂಸ್ಥೆ, ಸ್ವಸ್ಥಿ ಹೆಲ್ತ್ ವ್ಯಲ್ತ್ ಸಂಸ್ಥೆ ಮತ್ತು ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಗಳ ಸಹಕಾರದಡಿ ಬೆಂಗಳೂರು ಅಜೀಂ ಪ್ರೇಮಜಿ ಫೌಂಡೇಷನ್ ವತಿಯಿಂದ ಕಿರಾಣಿ ಕಿಟ್ ವಿತರಿಸಲಾಯಿತು.
ಶನಿವಾರ ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸೇರಿದ್ದ ವಿವಿಧ ಸಂಸ್ಥೆಗಳ ನೂರಾರು ಜನ ನೊಂದಾಯಿತ ಸದಸ್ಯ ಮಹಿಳೆಯರಿಗೆ ತಲಾ ೨೫ ಕೆಜಿ ಅಕ್ಕಿ, ೨ ಕೆಜಿ ಎಣ್ಣೆ, ೨ ಕೆಜಿ ಬೇಳೆ, ೫ ಕೆಜಿ ಗೋದಿ ಹಿಟ್ಟು, ೧ ಕೆಜಿ ಸಕ್ಕರೆ, ಖಾರದಪುಡಿ, ಮಸಾಲೆ ಪುಡಿ, ೪ ಸೋಪು, ಟೀಪುಡಿ, ಅರಿಶಿಣಪುಡಿ, ಸಾಂಬರ್ ಮಸಾಲಾ ಸೇರಿದಂತೆ ಇತರ ದಿನಸಿ ವಸ್ತುಗಳಿಂದ ಕೂಡಿದ್ದ ಒಟ್ಟು ೧೮೪ ಕಿಟ್‌ಗಳನ್ನು ವಿತರಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಜೀಂ ಪ್ರೇಮಜಿ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿ ಡಾ.ಭೋಜನಾಯಕ್ ಎಲ್.ಎಚ್, ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಘೋಷಿಸಲಾದ ಲಾಕ್‌ಡೌನ್‌ದಿಂದ ಬಹುತೇಕ ಬಡ ಕುಟುಂಬಗಳು ದುಡಿಮೆಯಿಂದ ವಂಚಿತರಾಗಿ ಹಸಿವೆಯಿಂದ ಮಲಗಬೇಕಾದ ದುಸ್ಥಿತಿ ಎದುರಾಗಿತ್ತು. ಕೂಲಿ ಕಾರ್ಮಿಕರ ಕುಟುಂಬಗಳು ಉಪವಾಸ ಮಲಗಬಾರದು ಎಂಬ ಕಾರಣಕ್ಕೆ ಅಜೀಂ ಪ್ರೇಮಜಿ ಫೌಂಡೇಷನ್ ದಿನಸಿ ವಿತರಣೆಗೆ ಆಧ್ಯತೆ ನೀಡಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮಂಗಳಮುಖಿ ಸಮುದಾಯ ಹಾಗೂ ಧಮನಿತ ಮಹಿಳೆಯರ ಕಷ್ಟಕ್ಕೆ ಸ್ಪಂದಿಸಲು ನಮ್ಮ ಸಂಸ್ಥೆ ಅಳಿಲು ಸೇವೆಯಲ್ಲಿ ತೊಡಗಿದೆ. ಅಲ್ಲದೆ ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ವಿವಿಧ ಸಂಘ ಸಂಸ್ಥೆಗಳ ಮೂಲಕ ೨೪೫೦೦ ಕಿಟ್‌ಗಳನ್ನು ಹಂಚಲಾಗಿದೆ. ಒಟ್ಟು ಒಂದು ಲಕ್ಷ ಕಿಟ್ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಮಂಗಳಮುಖಿಯರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸ್ನೇಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೌನೇಶ ಕೋರವಾರ, ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಡಾ.ಜುನೈದ್ ಖಾನ್, ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ಲತಾ ವಿ.ಅಲಬನೂರು, ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆಯ ಜಿಲ್ಲಾ ಆಪ್ತ ಸಮಾಲೋಚಕರಾದ ಹಣಮಂತ ಜಾಧವ, ರೇಖಾ ನರಗುಂದ, ಬೀರಲಿಂಗ ಪೂಜಾರಿ, ಜ್ಯೋತಿ ಆಡಕಿ ಪಾಲ್ಗೊಂಡಿದ್ದರು.