ಆಳಂದ: ರಾಜ್ಯ ಸರ್ಕಾರ ಕೊರೋನಾ ಸಮಸ್ಯೆ ಸೇರಿದಂತೆ ಇತರೆ ವಿಷಯಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಅದಕ್ಕಾಗಿ ಮುಖ್ಯಮಂತ್ರಿಗಳು ಸಚಿವ ಸಂಪುಟ ಹಾಗೂ ಅಧಿಕಾರಿಗಳು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶುಕ್ರವಾರ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೩೦ ಲಕ್ಷ.ರೂ ವೆಚ್ಚದ ಮೂರು ಶಾಲಾ ಕೋಣೆಗಳ ನಿರ್ಮಾಣ ಹಾಗೂ ೧೦ ಲಕ್ಷ.ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಕೊರೋನಾ ವೈರಸ್ ಎಲ್ಲ ಕಡೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಜನ ಸ್ವಯಂ ರಕ್ಷಣೆಗೆ ಮುಂದಾಗಬೇಕಿದೆ ಅಲ್ಲದೇ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸಿಕೊಂಡು ಓಡಾಡುವುದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ ಈ ನಿಟ್ಟಿನಲ್ಲಿ ಜನರು ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಲಾಡ ಚಿಂಚೋಳಿ ಗ್ರಾಮಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ಬದ್ಧರಾಗಿದ್ದು ಮುಂದಿನ ದಿನಗಳಲ್ಲಿ ಒಂದೊಂದಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಜೊತೆಗೆ ಆದ್ಯತೆಯ ಮೇಲೆ ಕಾಮಗಾರಿಗಳನ್ನು ಮಂಜೂರಿ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ವೀರಣ್ಣ ಮಂಗಾಣೆ, ಚಂದ್ರಕಾಂತ ಮಂಗಾಣೆ, ರಾಜಶೇಖರ ಮಲಶೆಟ್ಟಿ, ಶಂಕರರಾವ ಪಾಟೀಲ, ಅಣ್ಣಾರಾವ ಪಾಟೀಲ, ಪ್ರಭುಲಿಂಗ ಹುಲಿ, ಶಿವಾನಂದ ಪಾಟೀಲ ಸೇರಿದಂತೆ ಇತರರು ಇದ್ದರು.