ಶಹಾಬಾದ:ಮಳೆಯಾಶ್ರಿತ ಭೂಮಿಯಲ್ಲಿ ತೊಗರಿ, ಜೋಳ, ಹೆಸರು ಹತ್ತಿ ಬೆಳೆದು ಮಳೆಯಿಲ್ಲದೇ, ವಾತಾವರಣ ವೈಪರಿತ್ಯದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದ ಇಲ್ಲಿನ ರೈತರು ಇದರಿಂದ ಹೊರಬಂದು ಹೊಸ ಆಲೋಚನೆಯಿಂದ ಕೊಳವೆ ಬಾವಿ ತೋಡಿಸಿ ಕಬ್ಬು ಬಾಳೆ ಬೆಳೆದು ರೈತ ಪ್ರಗತಿದಾಯಕ ಬದುಕು ನಡೆಸಬಹುದೆಂಬ ನಿರೀಕ್ಷೆಗಳು ಸುಳ್ಳಾಗಿದೆ.ನಾಡಿಗೆ ಸಿಹಿ ಹಂಚುವ ಅನ್ನದಾತ ಇಂದು ಕಹಿ ಉಣ್ಣುವ ಪರಿಸ್ಥಿತಿ ಬಂದೊದಗಿದೆ.
ಹೌದು ವರ್ಷಪೂರ್ತಿ ಜಮೀನಿನಲ್ಲಿ ದುಡಿಯುವ ರೈತರಿಗೆ ಅವರ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತಿಲ್ಲ.ಅವರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ.ಕಲಬುರಗಿ ಜಿಲ್ಲೆ ಚಿತ್ತಾಪೂರ ಹಾಗೂ ಶಹಾಬಾದ ತಾಲೂಕಿನ ರೈತರು ಜಮೀನಿನಲ್ಲಿ ದುಡಿದು ಕಬ್ಬು ಬೆಳೆದು ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿನ ಬಾಕಿಯನ್ನು ಸರಿಯಾದ ಸಮಯಕ್ಕೆ ನೀಡದೇ ಕಾರ್ಖಾನೆ ಆಡಳಿತ ಮಂಡಳಿಗಳು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ.
ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ಸುಮಾರು 23 ಕೋಟಿ ಕಬ್ಬಿನ ಹಣವನ್ನು ಬಾಕಿ ಉಳಿಸಿಕೊಂಡು, ರೈತರ ಆಕ್ರೋಶಕ್ಕೆ ತುತ್ತಾಗಿದೆ. ಸುಮಾರು ಒಂದು ವರ್ಷದಿಂದ ಹಣ ಪಾವತಿ ಮಾಡದೇ ರೈತರ ಜತೆ ಕಣ್ಣಾ ಮುಚ್ಚಾಲೆ ಆಟವಾಡುತ್ತಿದೆ.ಇದರಿಂದ ರೈತರು ಬೇಸತ್ತು ಹೋರಾಟಕ್ಕೂ ಇಳಿದಿದ್ದರೂ ಕೂಡ ಹಣ ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದರೇ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಎಂದು ಹೇಳಿದ್ದಾರೆ.ಅಲ್ಲದೇ ಎಲ್ಲಾ ರೈತರು ಒಟ್ಟಗೂಡಿ ಸಮಸ್ಯೆ ಜಿಲ್ಲಾಧಿಕಾರಿಗಳ ಮುಂದಿಡಲಾಗಿದೆ. ಜಿಲ್ಲಾಧಿಕಾರಿಗಳು ಕಾರ್ಖಾನೆಗೆ ನೋಟಿಸ್ ನೀಡಿದ್ದರು.ತದನಂತೆ ಕಾರ್ಖಾನೆಯ ಅಧಿಕಾರಿ ವರ್ಗ ಜುಲೈ 20 ರಂದು ರೈತರ ಎಲ್ಲಾ ಹಣವನ್ನು ಪಾವತಿ ಮಾಡಲಾಗುತ್ತದೆ ಎಂದು ಲಿಖಿತವಾಗಿ ಬರೆದು ಕೊಟ್ಟಿದ್ದಾರೆ. ಆದರೆ ಅವಧಿ ಮುಗಿದು ಆರು ದಿನಗಳು ಕಳೆದರೂ ಇನ್ನೂ ಹಣ ಪಾವತಿಯಾಗಿಲ್ಲ.ಇದರಿಂದ ರೈತರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.ಕಾರ್ಖಾನೆಯನ್ನು ಸೀಸ್ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ.ಸೀಸ್ ಮಾಡಿದರೇ ನಮ್ಮ ಹಣ ಯಾರು ನೀಡುವರು ಎಂಬ ಯಕ್ಷ ಪ್ರಶ್ನೆ ರೈತರಲ್ಲಿ ಕಾಡಲಾರಂಭಿಸಿದೆ.
ಕಲಬುರಗಿ ಜಿಲ್ಲೆಯ ಶಹಾಬಾದ ಮತ್ತು ಚಿತ್ತಾಪೂರ ತಾಲೂಕಿನ ಮುತ್ತಗಿ, ಭಂಕೂರ, ಜೀವಣಗಿ,ಹೊನಗುಂಟಾ,ಮಾಲಗತ್ತಿ,ಕಡೆಹಳ್ಳಿ, ಗೋಳಾ ಸೇರಿದಂತೆ ಅನೇಕ ಹಳ್ಳಿಯ ಜನರು ಕಬ್ಬಿನ ಹಣಕ್ಕಾಗಿ ದಿನನಿತ್ಯ ನೂರಾರು ಕಿಮೀ ಅಲೆದಾಡುತ್ತಿದ್ದಾರೆ.ಆದರೆ ಕಂಪನಿಯವರು ಯಾರನ್ನೂ ಬೇಟಿಯಾಗುತ್ತಿಲ್ಲ.ಇದರಿಂದ ರೈತರು ಕಂಗಾಲಾಗಿದ್ದಾರೆ.ಕೇವಲ ಕಲಬುರಗಿ ಮಾತ್ರವಲ್ಲದೇ ಯಾದಗಿರಿ ಸುರಪುರ ತಾಲೂಕಿನ ಅನೇಕ ರೈತರು ಸ್ಥಿತಿಯೂ ಇದೇ ರೀತಿ ಇದೆ. ಈಗಾಗಲೇ ರೈತರು ಬ್ಯಾಂಕಿನಿಂದ ಲಕ್ಷಗಟ್ಟಲೇ ಸಾಲ ಮಾಡಿ ಕೊಳವೆ ಬಾವಿ, ಪೈಪ್ಲೈನ್ ಮಾಡಿದ್ದಾರೆ. ಒಂದು ವರ್ಷದಿಂದ ಬ್ಯಾಂಕಿನ ಬಡ್ಡಿ ಸಹಿತ ಕಟ್ಟಿಲ್ಲ. ಮನೆಯಲ್ಲಿ ಮದುವೆ,ಆರೋಗ್ಯದ ಸಮಸ್ಯೆಗೆ ಹಣವಿಲ್ಲದಂತಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.ನಮ್ಮ ಗೋಳು ಯಾರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ರೈತರೊಬ್ಬರೂ ತಮ್ಮ ಸಂಕಷ್ಟ ಹೇಳಿಕೊಂಡರು.
ಹಣಕ್ಕಾಗಿ ರೈತರು ಪ್ರತಿನಿತ್ಯ ಪರದಾಡುತ್ತಿದ್ದಾರೆ.ಆದರೆ ರೈತರ ಹೆಸರಿನಲ್ಲಿ ಪ್ರಮಾಣ ವಚನ ತೆಗೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪನವರು ಇತ್ತ ಸ್ವಲ್ಪ ಗಮನಹರಿಸಬೇಕಿದೆ.ಅಧಿಕಾರಕ್ಕೆ ಬಂದು ಒಂದು ವರ್ಷದ ಸಾಧನೆ ಬಗ್ಗೆ ಪ್ರಚಾರ ತೆಗದುಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಇಲ್ಲಿನ ರೈತರ ಸಂಷ್ಟವನ್ನು ಆಲಿಸಿ ಅವರ ಸಮಸ್ಯೆಯನ್ನು ಬಗೆಹರಿಸಬೇಕಿದೆ.ಆ ನಿಟ್ಟಿನಲ್ಲಿ ರೈತರ ಪರವಾಗಿ, ಅವರ ಬೆನ್ನಿಗೆ ನಿಂತು ಕಾರ್ಖಾನೆಯಿಂದ ಬರುವ ಹಣವನ್ನು ರೈತರಿಗೆ ನೀಡಿಸುವಲ್ಲಿ ಮುಂದಾಗುವರೇ ಎಂದು ಕಾದು ನೋಡಬೇಕಾಗಿದೆ.
ರೈತರ ಕಬ್ಬಿನ ಹಣವನ್ನು ಪಾವತಿ ಮಾಡದ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದೆವೆ.ಆದರೂ ಹಣ ಪಾವತಿ ಮಾಡುತ್ತಿಲ್ಲ.ಅಲ್ಲದೇ ಈ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೂ ಎರಡು ಸಲ ದೂರವಾಣಿ ಮೂಲಕ ರೈತರ ಸಮಸ್ಯೆ ಬಗ್ಗೆ ತಿಳಿಸಿದರೂ ಉದಾಸೀನತೆ ತೋರುತ್ತಿದ್ದಾರೆ.ಈಗ ಹೋರಾಟವೊಂದೇ ಒಂದೇ ದಾರಿಯಾಗಿದೆ- ಬಸವರಾಜ ಕೋರಿ ತಾಲೂಕಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಹಾಬಾದ.
ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ಮೂರು ತಿಂಗಳ ಒಳಗಾಗಿ ರೈತರಿಗೆ ಹಣ ಪಾವತಿ ಮಾಡಬೇಕೆಂದು ನ್ಯಾಯಾಲಯ ಹೇಳುತ್ತದೆ.ಆದರೆ ಕಾರ್ಖಾನೆ ಆ ಆದೇಶವನ್ನು ಗಾಳಿಗೆ ತೂರಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ. ಒಂದು ವರ್ಷದಿಂದ ಹಣ ಪಾವತಿ ಮಾಡಿಲ್ಲ. ಕೂಡಲೇ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು- ಸಿದ್ಧಲಿಂಗಯ್ಯ ಸ್ವಾಮಿ, ಈರಣ್ಣ ಗುಡೂರ್ ಮುತ್ತಗಾ ಹಾಗೂ ಭಂಕೂರ ಗ್ರಾಮದ ರೈತರು.