ವಾಡಿ: ಪ್ರವಾಹ ಉಂಟಾಗಿ ಬೆಳೆ ಹಾನಿಗೀಡಾದ ನಾಲವಾರ ವಲಯದ ರೈತರಿಗೆ ಪರಿಹಾರ ಘೋಷಣೆ ಮಾಡಬೇಕು. ಭೂಮಿ ಖರೀದಿಸಿರುವ ಸೋಲಾರ್ ಘಟಕಗಳು ಪ್ರತಿ ಎಕರೆಗೆ ೪.೨೦ ಲಕ್ಷ ರೂ. ದರ ನೀಡಬೇಕು.
ಹಳ್ಳಕ್ಕೆ ಅಡ್ಡಲಾಗಿ ಎಲ್ ಐಂಡ್ ಟಿ ಸೋಲಾರ ಕಂಪನಿಯವರು ಅಕ್ರಮವಾಗಿ ಕಟ್ಟಿರುವ ತಡೆಗೋಡೆಯನ್ನು ತೆರುವುಗೊಳಿಸಬೇಕು. ನಾಲವಾರ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು. ನಾಲವಾರ ಗ್ರಾಮದಲ್ಲಿ ಸರಕಾರಿ ಪಪೂ ಕಾಲೇಜು ಮತ್ತು ಪೊಲೀಸ್ ಉಪ ನಿರೀಕ್ಷಕರ ಕಚೇರಿ ಸ್ಥಾಪಿಸಬೇಕು. ಬಾಡಿಗೆ ಮನೆಯ ನಾಡ ಕಚೇರಿಗೆ ಸ್ವಂತ ಕಟ್ಟಡ ಮಂಜೂರು ಮಾಡಬೇಕು. ಪಶು ಆಸ್ಪತ್ರೆಗೆ ಸಿಬ್ಬಂದಿಗಳ ನೇಮಕ ಮಾಡಬೇಕು. ಹದಗೆಟ್ಟ ಎಲ್ಲಾ ಗ್ರಾಮಗಳ ರಸ್ತೆಗಳಿಗೆ ಮರು ಡಾಂಬರೀಕರಣ ಮಾಡಬೇಕು. ಗ್ರಾಮೀಣ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗಾಗಿ ಆಗ್ರಹಿಸಿ ಕರವೇ (ನಾರಾಯಣಗೌಡ ಬಣ) ನೇತೃತ್ವದಲ್ಲಿ ರೈತರು ಮಂಗಳವಾರ ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ನಾಲವಾರ ವಯಲದ ಅಧ್ಯಕ್ಷ ಶಿವುಕುಮಾರ ಸುಣಗಾರ, ನೂರಾರು ಜನ ಕಾರ್ಯಕರ್ತರು ಹಾಗೂ ರೈತರನ್ನು ಸಂಘಟಿಸಿ ಒಂದು ತಾಸು ರಾಷ್ಟ್ರೀಯ ಹೆದ್ದಾರಿಯ ಮೇಲೆ ಕುಳಿತು ರೈತರ ಸಮಸ್ಯೆ ಕೇಳದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು. ಎಕರೆಗೆ ಕೇವಲ ೨ ಲಕ್ಷ ರೂ. ನೀಡಿ ಕೃಷಿ ಜಮೀನು ಖರೀದಿಸುತ್ತಿರುವ ಸೋಲಾರ ಕಂಪನಿಗಳು, ರೈತರಿಗೆ ಮೋಸ ಮಾಡುತ್ತಿವೆ. ಪ್ರಭಾವಿ ರೈತರಿಗೊಂದು ದರ ಬಡ ರೈತರಿಗೊಂದು ದರ ನಿಗದಿಪಡಿಸಿ ಜಮೀನು ಕಸಿಯಲಾಗುತ್ತಿದೆ. ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಗೋಡೆ ಕಟ್ಟಿರುವ ಸೋಲಾರ ಕಂಪನಿ, ಪ್ರವಾಹ ಉಕ್ಕಿ ಸಾವಿರಾರು ಎಕರೆ ಬೆಳೆ ಹಾನಿಗೆ ಕಾರಣವಾಗಿವೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತೂವಾರಿ ಸಚಿವರೂ ಕೂಡ ನಾಲವಾರ ವಲಯದ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಜಿಲ್ಲಾಡಳಿತ ಕೂಡಲೇ ರೈತರ ನೆರವಿಗೆ ಬರದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರೊಂದಿಗೆ ವಾಗ್ವಾದ: ಮನವಿ ಪತ್ರ ಸ್ವೀಕರಿಸಲು ಸ್ಥಳಕ್ಕೆ ಆಗಮಿಸಿದ ನಾಲವಾರ ಉಪ ತಹಶೀಲ್ದಾರ ವೆಂಕನಗೌಡ ಪಾಟೀಲ ಅವರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು. ಈ ಭಾಗದ ಸೋಲಾರ್ ಕಂಪನಿಗಳಿಂದ ರೈತರು ಅನ್ಯಾಯಕ್ಕೊಳಗಾಗುತ್ತಿದ್ದಾರೆ. ಕೃಷಿ ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಅಧಿಕಾರಿಗಳು ಪರಿಶೀಲನೆ ನಡೆಸಿದರೂ ಕ್ರಮಕ್ಕೆ ಮುಂದಾಗಿಲ್ಲ. ಭರವಸೆ ನೀಡಿ ಮನವಿ ಸ್ವೀಕರಿಸಲು ಬಂದಿದ್ದರೆ ನಾವು ಒಪ್ಪುವುದಿಲ್ಲ. ಯಾವೂದೇ ಕಾರಣಕ್ಕೂ ಹೆದ್ದಾರಿ ಬಿಟ್ಟು ಏಳುವುದಿಲ್ಲ ಎಂದು ಪಟ್ಟು ಹಿಡಿದರು. ಪಿಎಸ್‌ಐ ವಿಜಯಕುಮಾರ ಭಾವಗಿ ಮಧ್ಯಪ್ರವೇಶಿಸಿ ಸ್ಥಳ ಪರಿಶೀಲನೆ ನಡೆಸಿ ಆದಷ್ಟು ಬೇಗ ಕ್ರಮ ಕೈಗೊಳ್ಳಾಗುವುದು ಎಂಬ ಮಾತಿಗೆ ಪ್ರತಿಭಟನೆ ಹಿಂಪಡೆದರು.
ಕರವೇ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ, ಮುಖಂಡರಾದ ಮೌನೇಶ ಕಂಬಾರ, ಶಂಕರ ಭಜಂತ್ರಿ, ರಾಯಪ್ಪ ಪೂಜಾರಿ, ಅಶೋಕ ಗುತ್ತೇದಾರ, ಶಿವಯೋಗಿ ನಾಟೀಕಾರ, ಸಿದ್ದು ಪೂಜಾರಿ ವಾಡಿ, ಮಲ್ಲಿಕಾರ್ಜುನ ತಳವಾರ, ಈರಣ್ಣ ಕೊಳ್ಳಿ, ಸಂತೋಷ ಕೊಂಕನಳ್ಳಿ, ರವಿ ಗುತ್ತೇದಾರ, ಮರಲಿಂಗಪ್ಪ ಟಣಕೇದಾರ, ಸಿದ್ದು ಸುಗೂರ, ಸಿದ್ದಣ್ಣಗೌಡ ದಿಗ್ಗಾಯಿ, ಪಂಪಣಗೌಡ, ಚಂದ್ರಾಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.