ಚಿತ್ತಾಪುರ: ತಾಲೂಕಿನ ಮರತೂರ ಗ್ರಾಮದ ಸೈಯದ ದಾದಾಪೀರ ದರ್ಗಾದಲ್ಲಿ ರಂಜಾನ ಹಬ್ಬ ಆಚರಣೆ ನಿಮಿತ್ಯ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ವಿರಕ್ತಮಠದ ಪೂಜ್ಯರಾದ ಶ್ರೀಶೈಲ್ ಮಹಾಸ್ವಾಮಿಗಳು ಮಾತನಾಡಿ, ಹಿಂದೂ ಬಾಂಧವರಿಗೆ ಹೇಗೆ ಶ್ರಾವಣ ತಿಂಗಳಖು ಪವಿತ್ರವೋ ಅಷ್ಟೇ ಪವಿತ್ರ ಮುಸ್ಲಿಂ ಬಾಂಧವರಿಗೆ ರಂಜಾನ್ ತಿಂಗಳಾಗಿದೆ. ಈ ತಿಂಗಳಲ್ಲಿ ಪ್ರತಿನಿತ್ಯ ಪ್ರಾರ್ಥನೆ, ದಾನ, ಧರ್ಮದೊಂದಿಗೆ ಪರಿಚಯ ಅಥವಾ ಅಪರಿಚಯ ಅನ್ನದೇ ಈದ್ ಮುಬಾರಕ್ ಎಂದು ಪರಸ್ಪರ ಹಸ್ತಲಾಘನ ಮಾಡುವ ಮೂಲಕ ನಮ್ಮಿಬ್ಬರನ್ನು ದೇವರು ಕ್ಷಮಿಸಲಿ ಪ್ರಾರ್ಥಿಸಿ ಅಲಂಗಿಸಿಕೊಳ್ಳುವುದೇ ಈ ಹಬ್ಬದ ವಿಶೇಷ ಅನ್ನುತ್ತಾ ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಅದುವೇ ಸನ್ಮಾರ್ಗದಲ್ಲಿ ಸಹನೆಯಿಂದ ಬದುಕಿ ಬಾಳುವುದೇ ಆಗಿದೆ ಎಂದು ಮರತೂರ ವಿರಕ್ತ ಮಠದ ಪೂಜ್ಯ ಶ್ರೀಶೈಲ್ ಮಹಾಸ್ವಾಮಿಗಳು ಮರತೂರಿನಲ್ಲಿ ಹಜರತ್ ಸೈಯ್ಯದ ದಾದಾಪೀರ ದರ್ಗಾದಲ್ಲಿ ಹಮ್ಮಿಕೊಂಡ ರಂಜಾನ ಹಬ್ಬದ ಆಚರಣೆಯಲ್ಲಿ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಗಮಿಸಿದ ನ್ಯಾಯವಾದಿ ಶಿವರಾಜ ಅಂಡಗಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸಾಮೂಹಿಕವಾಗಿ ಸಂಗ್ರಹಿಸಿದ ಹಣದಲ್ಲಿ ಗುಡಿ, ಗುಂಡಾರ, ಮಠ, ಮಜ್ಜೀದ ಕಟ್ಟಿಸುವುದು ನೋಡಿದ್ದೇವೆ. ಆದರೆ ಇಲ್ಲಿ ಆರ್.ಎಂ.ಡಾಕ್ಟರ ಸಾದಿಖ್ ರವರು ತಮ್ಮ ಸ್ವಂತ ಖರ್ಚಿನಲ್ಲಿ ತನ್ನ ಮುಸ್ಲಿಂ ಬಡವರಿಗೆ ಧರ್ಮದ ಸಂದೇಶ ಮುಟ್ಟಬೇಕೆಂಬ ಉದ್ದೇಶದಿಂದ ಪ್ರತಿನಿತ್ಯ ಧರ್ಮ ಗುರುಗಳಿಂದ ಖುರಾನ್ ಓದುವ ಪ್ರಾರ್ಥನೆ ಮಾಡಲು ದರ್ಗಾ ನಿರ್ಮಿಸಿ ಜೊತೆಗೆ ನಮಾಜ್ ಮಾಡಲು ತನ್ನ ಹೊಲವೇ ದಾನವಾಗಿ ಕೊಟ್ಟಿದ್ದು ನೋಡಿದರೆ ನಿಜವಾಗಿ ಹಬ್ಬದ ತಿರುಳು ಸಾಧ್ಯವಾಗಿಸಿದ ಸಾದಿಖ್ ರವರ ಇದೊಂದು ಸಾಧನೆ ಎಂದು ಮಾತನಾಡಿದರು.
ನಂತರ ಮಾತನಾಡಿದ ನ್ಯಾಯವಾದಿ ವಿನೋದಕುಮಾರ ಜನೇವರಿ ಸಾದಿಖ್ ರವರು ಧಾರ್ಮಿಕ ಚಿಂತಕ ಅಷ್ಟೇ ಅಲ್ಲ ಅವನು ಗೌಂಡಿಯಾಗಿ, ಮ್ಯಾಕ್ಯಾನಿಕ್‌ಆಗಿ, ಡ್ರೈವರ ಆಗಿ ಹೀಗೆ ತನ್ನ ಜೀವನದುದ್ದಕ್ಕೂ ಸಾರ್ವಜನಿಕ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಾ ಎಲ್ಲ ಧರ್ಮಿಯರೊಂದಿಗೆ ಬಾಂಧವ್ಯ ಇಟ್ಟುಕೊಂಡಿದ್ದಾನೆಂದು ಮಾತನಾಡಿದರು.
ಕಾರ್ಯಕ್ರಮಕ್ಕೆ ಕಲಬುರಗಿಯಿಂದ ಬಂದ ಎಲ್ಲ ಹಿಂದೂ ಧರ್ಮದ ಗೆಳೆಯರನ್ನು ಸನ್ಮಾನಿಸುವ ಮೂಲಕ ಸಿಹಿ ಹಂಚಿ ಗೌರವಿಸಿದ್ದು ಇದೊಂದು ವಿಶೇಷ ತನ್ನ ಧರ್ಮಿಯರೊಂದಿಗೆ ಇನ್ನೊಂದು ಧರ್ಮಿಯರೊಂದಿಗೆ ಗೌರವದಿಂದ ಕಾಣುವ ವ್ಯಕ್ತಿತ್ವ ಮೆಚ್ಚುವಂತಹದ್ದು ಎಂದು ಹಿರಿಯ ನ್ಯಾಯವಾದಿ ಹಣಮಂತರಾವ ಬಿರಾದಾರ ಬಿಲಗುಂದಿ ಮಾತನಾಡಿದರು.
ಕೊನೆಯಲ್ಲಿ ಕಲಬುರಗಿ ವಕೀಲರ ಗೆಳೆಯರ ಬಳಗದಿಂದ ತನ್ನ ಸ್ವಂತ ಖರ್ಚಿನಲ್ಲಿ ದರ್ಗಾ ನಿರ್ಮಿಸಿ ಸಾದನೆ ಮಾಡಿದ ಸಾದಿಖ್ ರವರಿಗೆ ಸನ್ಮಾನಿಸಿ ಸತ್ಕರಿಸಿದರು. ದಾದಾಪೀರ ದರ್ಗಾದ ಅಧ್ಯಕ್ಷ ಡಾ.ಸಾದಿಖ್, ಕಾರ್ಯದರ್ಶಿ ಸೈಯದ ಖಲೀಲ ಶಹಾ, ನ್ಯಾಯವಾದಿ ತಿಪ್ಪಣ್ಣ ಪೂಜಾರಿ, ಇಂಜಿನಿಯರ ವಿಶ್ವನಾಥ ಸಿರಗಾಪೂರ, ದಸ್ತಗೀರಸಾಬ್ ಖಾದಿರ, ಖಂಡೇರಾವ ಪವಾರ, ಶಮಶೋದ್ದಿನ್ ಗೋಳಾ, ದಸ್ತಗೀರಸಾಬ್ ಚೌಧರಿ, ಅಫಸರಅಲಿ ಸೌದಾಗರ, ಅಲ್ಲಾವುದ್ದೀನ್ ಶಹಾ, ಹನಿಫ್ ಪಟೇಲ್, ನದೀಮಸಾಬ್ ಜಲಾಲಬಾರ್, ಮುತವಲಿಸಾಬ್ ಲಾಡೇಶ ಮಖಾನದಾರ, ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ರವಿಕುಮಾರ ಹಾಗೂ ಇತರರು ಉಪಸ್ಥಿತರಿದ್ದರು.