ಭ್ರಷ್ಟಾಚಾರ ವಿರುದ್ಧ ಅರಿವು ಸಪ್ತಾಹ: ಎಸಿಬಿ ಎಸ್‍ಪಿ ಮೇಘಣ್ಣನವರ ಚಾಲನೆ

0
66

ಕಲಬುರಗಿ: ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27ರಿಂದ ನವೆಂಬರ್ 05ವರೆಗೆ ಜಾಗೃತಿ ಅರಿವು ಸಪ್ತಾಹ-2020 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣನವರ್ ಅವರು ತಿಳಿಸಿದರು.

ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಮಂಗಳವಾರ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 28ರಂದು ಕಲಬುರಗಿ ತಾಲ್ಲೂಕು ತಹಸೀಲ್ದಾರ್ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ, ನ.29ರಂದು ಕಮಲಪೂರ ತಾಲ್ಲೂಕು ಪಂಚಾಯತ್ ಕಚೇರಿ ಮತ್ತು ಜೇವರ್ಗಿ ತಾಲ್ಲೂಕು ಪಂಚಾಯತ್ ಕಚೇರಿ, ನವೆಂಬರ್ 02ರಂದು ಚಿತ್ತಾಪೂರ ತಾಲ್ಲೂಕು ಪಂಚಾಯತ್ ಕಚೇರಿ ಮತ್ತು ಆಳಂದ ತಾಲ್ಲೂಕು ಪಂಚಾಯತ್ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Contact Your\'s Advertisement; 9902492681

ನ.03ರಂದು ಕಲಬುರಗಿ ಎಸಿಬಿ ಪೊಲೀಸ್ ಠಾಣೆ ಸಿಬ್ಬಂದಿಗಳಿಗಾಗಿ ತಿಳುವಳಿಕೆ ರಸಪ್ರಶ್ನೆ ಸ್ಪರ್ಧೆ, ನ. 04ರಂದು ಕಮಲಾಪೂರ್ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ಕಾರ್ಯಕ್ರಮ ಹಾಗೂ ನ.05ರಂದು ಕಲಬುರಗಿ ರೈಲ್ವೆ ಸ್ಟೇಷನ್ ಕೇಂದ್ರ ಬಸ್ ನಿಲ್ದಾಣ, ಶರಣಬಸವೇಶ್ವರ ಗುಡಿ, ಖಾಜಾ ಬಂದೇನವಾಜ್ ದರ್ಗಾ, ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಕರಪತ್ರ ಹಂಚಿಕೆ ಮತ್ತು ಅಂಟಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಎಸ್‍ಪಿ ಮಹೇಶ್ ಮೇಘಣ್ಣನವರ್ ತಿಳಿಸಿದರು.

2020ರಲ್ಲಿ 09 ಭ್ರಷ್ಠಾಚಾರ ಕೇಸ್‍ಗಳನ್ನು ಟ್ರ್ಯಾಪ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಪ್ರವೃತ್ತವಾಗುವುದಾಗಿ ತಿಳಿಸಿದ ಅವರು, ಅಧಿಕಾರಿಗಳು ಲಂಚ ಪಡೆಯುತ್ತಿರುವುದಕ್ಕೆ ಪೂರಕ ದಾಖಲಾತಿಗಳನ್ನು ಸಂಗ್ರಹಿಸಿ ಮಾಹಿತಿ ನೀಡಿದರೆ, ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗೆ ಅಮಾನತು, ವಜಾ, ಜೈಲು ಮುಂತಾದ ಶಿಕ್ಷೆಗಳಾಗಲಿ, ಆದರೆ, ಪ್ರಾಮಾಣಿಕ ಅಧಿಕಾರಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂದು ಅವರು ಒತ್ತಿ ಹೇಳಿದರು. ವಿವಿಧ ಹಂತದ ಪ್ರಕ್ರಿಯೆಗಳಿರುವುದರಿಂದ ಪ್ರಕರಣಗಳ ತನಿಖೆಯಲ್ಲಿ ವಿಳಂಬವಾಗುವುದು ಸಹಜ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ನಾಗರಿಕರು ಮತ್ತು ಖಾಸಗಿ ವಲಯದ ಎಲ್ಲಾ ಪಾಲುದಾರರು ಸೇರಿ ಕೆಲಸ ಮಾಡಿದಾಗ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಡಿಎಸ್‍ಪಿ ವಿರೇಶ್ ಅವರು ಮಾತನಾಡಿ, ಭ್ರಷ್ಠಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜಾಥಾ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಯಾವುದೇ ಜಾಥಾ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಿರುವುದಿಲ್ಲ. ಬದಲಾಗಿ ಆಯಾ ತಾಲ್ಲೂಕಿನಲ್ಲಿನ ಜನನಿಬಿಡ ಪ್ರದೇಶದಲ್ಲಿ ಅಧಿಕಾರಿಗಳು ಭೇಟಿ ನೀಡಿ ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here