ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ಅಮ್ಮ ಗೌರವ ಪುರಸ್ಕಾರಕ್ಕೆ ನಾಲ್ವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.
ಕಳೆದ ೧೧ ವರ್ಷಗಳಿಂದ ಆರಂಭಗೊಂಡ ‘ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿಯೂ ನಾಡು-ನುಡಿಗೆ ನೀಡಿದ ಕೊಡುಗೆಯನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಸತ್ಕರಿಸಲಾಗುತ್ತದೆ. ಈ ಬಾರಿಯ ‘ಅಮ್ಮ ಗೌರವ’ ಪುರಸ್ಕಾರಕ್ಕೆ ಬೀದರ ಜಿಲ್ಲೆಯ ಹಿರಿಯ ಲೇಖಕ ದೇಶಾಂಶ ಹುಡಗಿ, ಸೇಡಂನ ಶಿಕ್ಷಣ ಪ್ರೇಮಿ, ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ, ಹಿರಿಯ ವಕೀಲರು ಆಗಿರುವ ಧುರೀಣರಾದ ಎಂ. ನಾಗಪ್ಪ , ಕಸಾಪ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಪಿ.ಎಂ.ಮಣೂರ ಹಾಗೂ ಕಿಡ್ನಿ ದಾನ ಮಾಡುವ ತಾಯ್ತನದ ಜವಾಬ್ದಾರಿಗೆ ಮಹತ್ವ ತಂದುಕೊಟ್ಟ ಕಲಬುರಗಿಯ ರೇಖಾಬಾಯಿ ಪಿ.ಅರಗಲಮನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದಶಮಾನೋತ್ಸವ ವರ್ಷದಿಂದ ಆರಂಭಗೊಂಡ ಅಮ್ಮ ಗೌರವ ಪುರಸ್ಕಾರವನ್ನು ಮುಂದುವರಿಸಲಾಗಿದೆ. ಏಳು ಜನರಿಗೆ ಅಮ್ಮ ಪ್ರಶಸ್ತಿ ಹಾಗೂ ನಾಲ್ವರಿಗೆ ಅಮ್ಮ ಗೌರವ ಪುರಸ್ಕಾರ ನೀಡಲಾಗುತ್ತಿದೆ. ಈ ಕಾರ್ಯಕ್ರಮವು ನ. ೨೬ ರಂದು ಸಚಿಜೆ ೫.೩೦ ಕ್ಕೆ ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ವ್ಮಠದ ಪೂಜ್ಯ ಡಾ.ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹಾಗೂ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಮುಖ್ಯ ಅತಿಥಿಗಳಾಗಿರುವರು. ಕಲಬುರಗಿ ರಂಗಾಯಣ ಅಧ್ಯಕ್ಷ ಪ್ರಭಾಕರ ಜೋಶಿ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಇಬ್ಬರು ಮಹಿಳೆಯರಿಗೆ ಸ್ವಾವಲಂಬಿ ಬದುಕಿಗಾಗಿ ನಿವೃತ್ತ ಮೇಷ್ಟ್ರು ನಾಗಪ್ಪ ಮುನ್ನೂರ್ ಸ್ಮರಣಾರ್ಥ ಹೊಲಿಗೆ ಮಷಿನ್‌ಗಳನ್ನು ವಿತರಿಸಲಾಗುವುದು ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.