ಕಲಬುರಗಿ: ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಪ್ರಿಯಾಂಕ್ ಖರ್ಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಚಿವರು ಕಾರ್ನಾಡರು ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ.ಸಾಹಿತಿ, ನಾಟಕಕಾರರಾಗಿ, ಹಾಗೂ ಸಿನೆಮಾನಟರಾಗಿ ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೈದ ಅಪರೂಪ ವ್ಯಕ್ತಿತ್ವ ಹೊಂದಿದ್ದರು.
1959 ರಲ್ಲಿ ಅವರು ಬರೆದ ಏಕಾಂಕ ನಾಟಕ ಮಾ ನಿಷಾಧ. ಆ ಮೂಲಕ ನಾಟಕಕಾರರಾಗಿ ಕನ್ನಡಸಾಹಿತ್ಯ ಲೋಕಕ್ಕೆ ಪರಿಚಿತರಾದ ಕಾರ್ನಾಡ್, ಯಯಾತಿ (1961), ತುಘಲಕ್ ( 1964), ಹಯವದನ ( 1972) ಅಂಜುಮಲ್ಲಿಗೆ ( 1977) ಹಿಟ್ಟಿನ ಹುಂಜ (1980), ನಾಗಮಂಡಲ ( 1990) ತಲೆದಂಡ (1990), ಅಗ್ನಿ ಮತ್ತು ಮಳೆ (1995), ಟಿಪ್ಪುವಿನ ಕನಸುಗಳು ( 1997) ಒಡಕಲು ಬಿಂಬ ( 2005), ಮದುವೆ ಅಲ್ಬಮ್ ಫ್ಲಾವರ್ಸ್ (2012) ಬೆಂದ ಕಾಳು ಆನ್ ಟೋಸ್ಟ್ ( 2012) ಹಾಗೂ ಕೊನೆಯ ನಾಟಕ ರಾಕ್ಷಸ ತಂಗಡಿ (2018) ಅವರ ಶ್ರೇಷ್ಟ ನಾಟಕಗಳಾಗಿವೆ.
ನಟರಾಗಿಯೂ ಖ್ಯಾತಿ ಹೊಂದಿದ್ದ ಡಾ ಕಾರ್ನಾಡರು, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಭಾಷೆ ಚಲನಚಿತ್ರಗಳಲ್ಲಿ ನಟಿಸಿದ್ದರು.
ರಂಗಭೂಮಿ ಸಾಹಿತ್ಯಕ್ಕೆ 1998 ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಹಾಗೂ ಕಾಳಿದಾಸ ಸಮ್ಮಾನ್ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದರು.
ಬಹುಮುಖ ಪ್ರತಿಭೆಯ ಕಾರ್ನಾಡರ ನಿಧನದಿಂದಾಗಿ ಕನ್ನಡ ಸಾಹಿತ್ಯಲೋಕ ಶ್ರೇಷ್ಠ ಚಿಂತಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮಾನ್ಯ ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.