ಸುರಪುರ: ನಗರದ ಕನ್ನಡ ಸಾಹಿತ್ಯ ಸಂಘದ ಸಭಾ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಸುರಪುರ ಕನ್ನಡ ಸಾಹಿತ್ಯ ಸಂಘ,ಭಾರತ ಬಹುತ್ವ ಭೂಮಿಕೆ ಗೆಳೆಯರ ಸಂಯುಕ್ತಾಶ್ರಯದಲ್ಲಿ ಖ್ಯಾತ ಚಿಂತಕ ಹಾಗು ಬರಹಗಾರ ವಿವೇಕಾನಂದ ಹೆಚ್.ಕೆ.ಅವರೊಂದಿಗೆ ಸಂವಾದ ಕಾರ‍್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಚಿಂತಕ ವಿವೇಕಾನಂದ ಹೆಚ್.ಕೆ ಮಾತನಾಡಿ,ಜನರಲ್ಲೀಗ ಜಾತೀಯತೆಯು ಎದ್ದುಕಾಣುತ್ತಿದೆ ಇದು ಉತ್ತಮ ಸಮಾಜಕ್ಕೆ ಮಾರಕವಾಗಿದೆ ಮತ್ತು ಆರ್ಥಿಕ ಸಮಾನತೆಗೆ ಧಕ್ಕೆತಂದು ಜನರಲ್ಲಿ ಒಡಕು ಮೂಡಿಸುತ್ತಿದೆ ಇದನ್ನು ಹೋಗಲಾಡಿಸಲು ದೇಶ, ರಾಜ್ಯದ ಜನರೊಂದಿಗೆ ಸೇರಿ ಪರಿವರ್ತನೆ ಮಾಡುವುದು, ಜನಪ್ರತಿನಿಧಿಗಳಿಗೆ ಅವರ ಕರ್ತವ್ಯದ ಬಗ್ಗೆ ಮನವರಿಕೆ ಮಾಡಿ ಜಾತ್ಯಾತೀತವಾಗಿ ಸಮಾನತೆಯ ಸಮಾಜ ನಿರ್ಮಾಣ ಮಾಡುವುದು ನನ್ನ ಉದ್ದೇಶವಾಗಿದೆ ಎಂದರು.
ಅಲ್ಲದೆ ಸಮಾನತೆಯ, ನಿರ್ಜಾತಿವಾದದ ಸಮಾಜ ನಿರ್ಮಾಣ, ಬಡವರಿಗೆ ಕಲಿಯಲು ಅನುಕೂಲ ಮಾಡಿ ಕೊಡುವುದು, ಧರ್ಮದ ಅಫೀಮು ಏರಿಸಿಕೊಂಡವರಿಗೆ ಸರಿಯಾದ ತಿಳುವಳಿಕೆ ಕೊಡುವ ಮೂಲಕ ಅವರು ಕೂಡ ಜಾತ್ಯಾತೀತ ಸಮಾದೆಡೆಗೆ ಸಾಗುವಂತೆ ಮಾಡುವುದು, ಮನುಷ್ಯನನ್ನು ಮನುಷ್ಯನಂತೆ ಕಾಣುವಂತೆ ಮಾಡುವುದೇ ನನ್ನ ಜ್ಞಾನ ಭಿಕ್ಷಾ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ’ ಎಂದರು.
ಬೀದರದಿಂದ ಪ್ರಾರಂಭಗೊಂಡ ಪಾದಯಾತ್ರೆ ಇಂದಿಗೆ ೩೭ ದಿನಗಳನ್ನು, ೯೨೬ ಕಿ.ಮೀ. ದೂರವನ್ನು ಕ್ರಮಿಸಿದೆ, ಆದರೆ ಇಲ್ಲಿನ ಹಳ್ಳಿಗಳ ಪರಿಸ್ಥಿತಿ ತುಂಬ ಗಂಭೀರವಾಗಿದೆ. ರಸ್ತೆಗಳು, ಆಟದ ಮೈದಾನಗಳು, ಶಾಲಾ ಕಟ್ಟಡಗಳು ಅತ್ಯಂತ ಕಳಪೆಯಾಗಿವೆ, ವ್ಯವಸ್ಥೆ ವಿರುದ್ಧ ಸಾಮಾನ್ಯ ಜನರು ಸಿಡಿದೇಳುವುದು, ಎಲ್ಲ ಸಾಮಾನ್ಯರೂ ಉತ್ತಮ ಸೌಲಭ್ಯಗಳೊಂದಿಗೆ ಬದುಕುವುದು ಯಾವಾಗ?’ ಎಂದು ಕೇಳಿದರು ವಿವೇಕಾನಂದ.
ಸಭೆಯ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ವಹಿಸಿ ಮಾತನಾಡಿದರು. ಸಭೆಯಲ್ಲಿ ಹಿರಿಯರಾದ ಬಸವರಾಜ ಜಮದ್ರಖಾನಿ, ಮಲ್ಲಯ್ಯ ಕಮತಗಿ, ಎ.ಕೆ.ಕಮಲಾಕರ, ದೇವೇಂದ್ರಪ್ಪ ಪತ್ತಾರ, ನಬೀಲಾಲ ಮಕಾನದಾರ, ಕುತುಬುದ್ಧೀನ್ ಅಮ್ಮಾಪುರ, ನಿಂಗಣ್ಣ ಚಿಂಚೋಡಿ, ಯಲ್ಲಪ್ಪ ಹುಲಕಲ್ಲ, ಮಲ್ಲಿಕಾರ್ಜುನ ಹಿರೇಮಠ, ಬೀರಣ್ಣ.ಬಿ.ಕೆ.ಆಲ್ದಾಳ, ಮುದ್ಧಪ್ಪ ಅಪ್ಪಾಗೋಳ, ಮೂರ್ತೆಪ್ಪ, ಶರಣಬಸವ ಯಾಳವಾರ, ವೆಂಕಟೇಶಗೌಡ ಪಾಟೀಲ, ದೊಡ್ಡ ಮಲ್ಲಿಕಾರ್ಜುನ ಉದ್ಧಾರ, ರಾಮಪ್ರಸಾದ ತೋಟದ, ಮುತ್ತು ಹಿರೇಮಠ, ಸಿದ್ಧಯ್ಯ ಸ್ಥಾವರಮಠ, ಎಸ್.ರಂಗನಾಥ, ಸಿದ್ಧಲಿಂಗಸ್ವಾಮಿ ಭಾಗವಹಿಸಿದ್ದರು.
ಮಹಾಂತೇಶ ಗೋನಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ದೇಸಾಯಿ ಸ್ವಾಗತಿಸಿದರು, ರಾಘವೇಂದ್ರ ಭಕ್ರಿ ವಂದಿಸಿದರು.