ಸುರಪುರ: ಮೂದಲನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾರರು ಬಿರುಸಿನ ಮತದಾನ ಮಾಡವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ತಾಲೂಕಿನಲ್ಲಿ ಯಾವೂಂದು ಮತಗಟ್ಟೆಯಲ್ಲಿ ಯಾವುದೆ ಗಲಭೆ ಇಲ್ಲದೆ ಶಾಂತಿಯುತವಾಗಿ ಮತದಾನ ಜರುಗಿದೆ. ತಾಲೂಕಿನಲ್ಲಿ ಒಟ್ಟು ಶೇ ೭೫ಕ್ಕೂ ಅಧಿಕ ಪ್ರಮಾಣದ ಮತದಾನವಾಯಿತು.
ತಾಲೂಕಿನ ೨೦ ಗ್ರಾಮ ಪಂಚಾಯತ್‌ಗಳ ೩೨೫ ಸ್ಥಾನಗಳಿಗೆ ೭೬೮ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬೆಳಗ್ಗೆ ೭ ಗಂಟೆಯಿಂದಲೇ ಮತದಾನವು ಪ್ರಾರಂಬವಾಯಿತು. ಸರಕಾರ ಕೊರೋನಾ ನಿಯಮಾವಳಿ ಅನುಸಾರ ಮತದಾರರು ಸರದಿ ಸಾಲಿನಿಂದಲೇ ಸ್ಯಾನಿಟೈಸ್, ಜ್ವರ ತಪಾಸಣೆ ವ್ಯವಸ್ಥೆ, ದೇಹದ ಉಷ್ಣಾಂಶ ಪರೀಕ್ಷಿಸಿಕೊಂಡು ಮತದಾನಕ್ಕೆ ಅನವು ಮಾಡಿಕೊಡಲಾಗಿತ್ತು.
ಮತದಾನದಲ್ಲಿ ಇಳಿವಯಸ್ಸಿನವರು, ಮಧ್ಯವಯಸ್ಕರು, ೧೮ ವರ್ಷ ಮೇಲ್ಪಟ್ಟ ಯುವ ಸಮುದಾಯ ಪಾಲ್ಗೊಂಡಿತ್ತು. ಮೊದಲಬಾರಿಗೆ ಮತದಾನ ಮಾಡಲು ಬಂದವರು ಸಂಕೋಚದಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು. ಹಿರಿಯರು ಹೇಳುತ್ತಿದ್ದುದ್ದನ್ನು ತದೇಕ ಚಿತ್ತದಿಂದ ಕೇಳುತ್ತಿದ್ದರು. ಗ್ರಾಮದ ಮುಖಂಡರು, ಯುವ ನಾಯಕರು ಮತದಾರರನ್ನು ಕರೆದುಕೊಂಡು ಮತಗಟ್ಟೆ ಕೇಂದ್ರಕ್ಕೆ ಬಿಡುವುದು ಎಲ್ಲೆಡೆ ಸಾಮಾನ್ಯವಾಗಿತ್ತು.
ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಹೋಗಿದ್ದ ಜನತೆ ಚುನಾವಣೆ ನಿಮಿತ್ಯ ಗ್ರಾಮಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಕೆಲವು ಗ್ರಾಮಗಳಿಗೆ ಕಾರು, ಕ್ರೂಸರ್, ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ದೂರದೂರುಗಳಿಂದ ಬಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಕವಡಿಮಟ್ಟಿ ಬಾದ್ಯಾಪುರ ಹೆಮನೂರ ತಳ್ಳಳ್ಳಿ ಸೇರಿ ಕೆಲವು ಗ್ರಾಮಗಳಲ್ಲಿ ಮಾತಿನ ಚಕಮುಕಿ ಬಿರುಸುಗೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಸಣ್ಣಪುಟ್ಟ ಗಲಾಟೆಗಳನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿನಿಡಿ ವಾತವರಣವನ್ನು ತಿಳಿಗೊಳಿಸಿ ಶಾಂತಿಯುತ ಮತದಾನಕ್ಕೆ ಅವಕಾಶಕಲ್ಪಿಸಿದನ್ನು ಬಿಟ್ಟೆರೆ ತಾಲೂಕಿನಾದ್ಯಂತ ಬಹುತೇಕ ಕೇಂದ್ರದಲ್ಲಿ ಶಾಂತಿಯುತವಾಗಿ ಮತದಾನವು ಜರುಗಿತು.