ಆಸ್ಪತ್ರೆ ಸಿಬ್ಬಂದಿಗಳ ವೇತನ ವಂಚಿಸಿದ್ದ ಆರೋಪಿ ಬಂಧನ

0
511

ಕಲಬುರಗಿ: ತಾನು ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯ ಒಟ್ಟು ೩೮ ಸಹೋದ್ಯೋಗಿಗಳ ಆರು ತಿಂಗಳ ಸಂಬಳ ೫.೫೨ ಲಕ್ಷ ರೂ. ವಂಚಿಸಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವಾಡಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ಅಕೌಂಟೆಂಟ್ ಸಿಬ್ಬಂದಿ ಸಂತೋಷಕುಮಾರ ಕಟ್ಟೆ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಿಜೀವುಲ್ಲಾ ಖಾದ್ರಿ ಅವರು ನೀಡಿದ ದೂರಿನ ಮೇರೆಗೆ ೨೦೨೦ರ ಫೆಬ್ರುವರಿ ತಿಂಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವಾಡಿ ಠಾಣೆಯ ಪಿಎಸ್ಐ ವಿಜಯಕುಮಾರ ಭಾವಗಿ, ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದರು. ಸಿಬ್ಬಂದಿಗಳ ಖಾತೆಗೆ ಸಂಬಳ ಜಮೆ ಮಾಡುವ ಬದಲು ಆರೋಪಿ ಸಂತೋಷಕುಮಾರ ಕಟ್ಟೆ ೫.೫೨ ರೂ. ಮೌಲ್ಯದ ಆರು ಚೆಕ್ಗಳನ್ನು ವೈದ್ಯಾಧಿಕಾರಿಯ ನಕಲಿ ಸಹಿ ಮಾಡಿ ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದ. ರೊಚ್ಚಿಗೆದ್ದ ಆಸ್ಪತ್ರೆಯ ಸಿಬ್ಬಂದಿಗಳು ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಆರೋಪಿ ಕಾಲ್ಕಿತ್ತಿದ್ದ.

Contact Your\'s Advertisement; 9902492681

ಶೋಕಿ ಜೀವನಕ್ಕಾಗಿ ಸರಕಾರಿ ನೌಕರಿ ಲೆಕ್ಕಿಸದೆ ಸಿಬ್ಬಂದಿಗಳ ವೇತನ ಲಪಟಾಯಿಸಿದ ಆರೋಪಿ ಸಂತೋಷ ಕಟ್ಟೆ, ಹೈದಾರಾಬಾದ ನಗರದ ಫ್ಲೈಓವರ್ ಕೆಳಗಿನ ಬಸ್ ನಿಲ್ದಾಣ ಬಳಿ ಬಲೂನ್ ಮಾರಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದ್ದು, ಖಚಿತ ಮಾಹಿತಿಯೊಂದಿಗೆ ಹೈದರಾಬಾದ ನಗರ ಪ್ರವೇಶಿಸಿದ ಪಿಎಸ್ಐ ವಿಜಯಕುಮಾರ ಭಾವಗಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಪ್ಪು ಒಪ್ಪಿಕೊಂಡ ಆರೋಪಿಯನ್ನು ಮಂಗಳವಾರ ಠಾಣೆಗೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್ಐ ಭಾವಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here