ಆಳಂದ: ಪಟ್ಟಣಕ್ಕೆ ಸಮೀಪವಿರುವ ಕೊರಳ್ಳಿ ಕ್ರಾಸ್ ಹತ್ತಿರ ವಿವಿಧ ಸರ್ಕಾರಿ ಶಾಲಾ, ಕಾಲೇಜುಗಳನ್ನು ಆರಂಭಿಸಿ ಆ ಪ್ರದೇಶವನ್ನು ಶೈಕ್ಷಣಿಕ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಯತ್ನಿಸಲಾಗುವುದು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದರು.
ಗುರುವಾರ ಕೊರಳ್ಳಿ ಕ್ರಾಸ್ ಹತ್ತಿರ ನಿರ್ಮಿಸಿರುವ ೨೦೧೮-೧೯ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ೧.೬೬ ಕೋ. ರೂ.ಗಳ ಅನುದಾನದಲ್ಲಿ ನಿರ್ಮಿಸಿದ ಬಿಸಿಎಂ ಇಲಾಖೆಯ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದರು.
ಆಳಂದ ಪಟ್ಟಣದಲ್ಲಿ ಸರ್ಕಾರಿ ನಿವೇಶನದ ಕೊರತೆ ಇರುವುದರಿಂದ ಮುಂದೆ ಬರುವ ಸರ್ಕಾರದ ವಿವಿಧ ಯೋಜನೆಗಳಿಗೆ ಕೊರಳ್ಳಿ ಕ್ರಾಸ್ ಹತ್ತಿರ ಇರುವ ಸರ್ಕಾರಿ ಜಾಗದಲ್ಲಿ ಅವಕಾಶ ಮಾಡಿಕೊಡಲಾಗುವುದು ಅಲ್ಲದೇ ಇಲ್ಲಿಗೆ ಹೋಗಿ ಬರಲು ಜನರಿಗೆ ಅನೂಕೂಲವಾಗುವಂತೆ ಸಿಟಿ ಬಸ್ ಸೇವೆ ಆರಂಭಿಸಲಾಗುವುದು ಎಂದರು.
ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ಸುಭಾಷ್ ಗುತ್ತೇದಾರ ಭೇಟಿ
ಸಧ್ಯ ತಾಲೂಕಿನಲ್ಲಿ ಹಲವು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ಬಾಡಿಗೆ ಕಟ್ಟುವುದು ಇಲಾಖೆಗಳಿಗೆ ಹೊರೆಯಾಗುತ್ತಿದೆ ಈ ನಿಟ್ಟಿನಲ್ಲಿ ಪರಿಹಾರ ಕೊಂಡುಕೊಳ್ಳುವಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚಿನ ವಸತಿ ನಿಲಯಗಳನ್ನು ತಾಲೂಕಿಗೆ ಮಂಜೂರಿ ಮಾಡಿಕೊಂಡು ಬಂದು ಸ್ವಂತ ಸ್ಥಳದಲ್ಲಿ ವಸತಿ ನಿಲಯಗಳು ನಡೆಯಲು ಅನುವು ಮಾಡಿಕೊಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ವೀರಣ್ಣ ಹತ್ತರಕಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ ಸಂಗಾ, ಮುಖಂಡರಾದ ಮಲ್ಲಿಕಾರ್ಜುನ ಕಂದಗೂಳೆ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ, ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ರಾಜಕುಮಾರ ಸನ್ಮುಖ, ಹಣಮಂತರಾವ ಪಾಟೀಲ, ಸಂದೇಶ ಜವಳಿ, ಬಿಸಿಎಂ ಅಧಿಕಾರಿ ಕಾಳೆ, ಎಇಇ ಈರಣ್ಣ ಕುಣಕೇರಿ, ಜೆಇ ಅರುಣಕುಮಾರ ಬಿರಾದಾರ, ಗುತ್ತಿಗೆದಾರ ಮಲ್ಲಿಕಾರ್ಜುನ ಕಲಬುರ್ಗಿ ಸೇರಿದಂತೆ ಇತರರು ಇದ್ದರು.