ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಶೋಷಿತರಿಗಾಗಿ ನೀಡಿದ ಮೂರು ಮಂತ್ರ: ಸಿಎಂ

0
22
ಬೆಂಗಳೂರು:  ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಧನೆ ನವ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಸಮಾನತೆಯ ಸಮಾಜಕ್ಕಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದಂತ ಮೂರು ಮಂತ್ರಗಳನ್ನು ಅವರು ಶೋಷಿತರ ವರ್ಗಕ್ಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.

ಇಂದು ಬೆಳಿಗ್ಗೆ ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಬಳಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ  ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಚಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಇಡಿ ಬದುಕನ್ನು ದೀನದಲಿತರ ರಕ್ಷಣೆಗಾಗಿ ಮುಡುಪಾಗಿಟ್ಟಿದ್ದರು, ಸಾಮಾಜಿಕ ಸಮಾನತೆಗಾಗಿ ಹೋರಾಟ ರೂಪಿಸಿ ದಮನಿತರ ಆಶಾಕಿರಣವಾಗಿದ್ದರು. ಯಾವುದೇ ಸಮುದಾಯ ಅಭಿವೃದ್ಧಿಯಾಗಲು ಶಿಕ್ಷಣವೊಂದೆ ಮುಖ್ಯ ಅಸ್ತ್ರ ಎಂದು ಪ್ರತಿಪಾದಿಸಿದವರು ಅವರು ಎಂದು ಹೇಳಿದರು.
ಆಧುನಿಕ ಭಾರತವನ್ನು ಜಾತಿ ಮತ್ತು ಮೇಲು-ಕೀಳುಗಳಂತ ವ್ಯವಸ್ಥೆಯನ್ನು ಮೀರಿ ಕಟ್ಟುವ ಹಾಗೂ ಮಹಿಳಾ ಸಮಾನತೆಯನ್ನು ಎತ್ತಿಡಿಯುವ ಮೂಲಕ ಸಮಾನತೆಯ ಕನಸನ್ನು ಕಂಡಿದ್ದರು. ಇಂತಹ ಮಹಾನ್ ನಾಯಕನ ಜಯಂತಿಯನ್ನು ಇಂದು ದೇಶದ ಉದ್ದಗಲಕ್ಕೂ ಆಚರಿಸಲಾಗುತ್ತಿದ್ದು, ಮಾನ್ಯ ಪ್ರಧಾನ ಮಂತ್ರಿಗಳಿಂದಿಡಿದು ಎಲ್ಲರೂ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಗೌರವ್ ಗುಪ್ತ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೋವಿಡ್-19 ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆವತಿಯಿಂದ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಸಮವಸ್ತ್ರ ಮತ್ತು ಸುರಕ್ಷತಾ ಧಿರಿಸುಗಳನ್ನು ಮುಖ್ಯಮಂತ್ರಿಗಳು ವಿತರಿಸಿದರು. ಬೆಂಗಳೂರಿನ ಒಟ್ಟು 18000 ಪೌರ ಕಾರ್ಮಿಕರಿಗೆ ಈ ನೂತನ ಸಮವಸ್ತ್ರ ಮತ್ತು ಸುರಕ್ಷತಾ ಧಿರಿಸು ವಿತರಿಸುವ ಯೋಜನೆಯನ್ನು ಬಿ.ಬಿ.ಎಮ್.ಪಿ ಜಾರಿಗೊಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here