ಶಹಾಬಾದ:ತಾಲೂಕಿನ ಗೋಳಾ(ಕೆ) ಗ್ರಾಮದ ಕಾಗಿಣಾ ನದಿಗೆ ಕಟ್ಟಲಾದ ಬ್ರಿಡ್ಜ್ ಕಮ್ ಬ್ಯಾರೇಜ್ ಗೋಡೆಯಲ್ಲಿ ಬಿರುಕು ಮೂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಕಳೆದ ಸುಮಾರು ೯ ವರ್ಷಗಳ ಹಿಂದಷ್ಟೇ ಕಟ್ಟಿದ ಬ್ರಿಡ್ಜ್ ಕಮ್ ಬ್ಯಾರೇಜ್‌ನ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.ಇದರಿಂದ ಸೇತುವೆ ಮೂಲಕ ಹೋಗಲು ಸ್ಥಳೀಯ ನಿವಾಸಿಗಳಲ್ಲಿ ಹಾಗೂ ಪ್ರಯಾಣಿಕರಲ್ಲಿ ಆತಂಕ ಸೃಷ್ಠಿಯಾಗಿದೆ.ಯಾವಾಗ ಏನಾಗುವುದೋ ಎಂಬ ಭಯ ಆವರಿಸಿದೆ.ಈ ಸೇತುವೆಯ ಮೇಲೆ ಲಘು ವಾಹನಗಳು ಹೋಗುತ್ತಿದ್ದವು. ಶಹಾಬಾದಿಂದ ವಾಡಿ ಪಟ್ಟಣಕ್ಕೆ ಹೋಗಲು ಗೋಳಾ(ಕೆ) ಗ್ರಾಮದ ಬ್ರಿಡ್ಜ್ ಕಮ್ ಬ್ಯಾರೇಜ್ ಮೂಲಕ ಹೋದರೆ ಬೇಗನೆ ಹೋಗಬಹುದು.ಅಲ್ಲದೇ ಸುಮಾರು ೮ ಕಿಮೀ ಉಳಿತಾಯವಾಗುತ್ತದೆ. ಆದರೆ ಇತ್ತಿನ ಎರಡು ವರ್ಷಗಳಿಂದ ಭಾರಿ ವಾಹನಗಳಾದ ಫರ್ಸಿ, ಪೇಚಿಂಗ್ ಕಲ್ಲುಗಳ ಲಾರಿ, ಅಕ್ರಮ ಮರಳು ತುಂಬಿದ ಟಿಪ್ಪರ್‌ಗಳು ಇದೇ ರಸ್ತೆಯಿಂದ ಹೋಗುತ್ತಿರುವುದರಿಂದ ಈ ರೀತಿ ಬಿರುಕು ಮೂಡಿರಬಹುದು. ಅಲ್ಲದೇ ಬ್ರಿಡ್ಜ್ ಕಮ್ ಬ್ಯಾರೇಜ್ ಕೆಳಗಡೆ ನೀರು ಕಡಿಮೆಯಾದಾಗ ಬ್ಯಾರೇಜ್ ಕೆಳಗಡೆ ಅಕ್ರಮವಾಗಿ ಮರಳು ಸಾಗಾಣಿಕೆಯಾಗಿರುವುದರಿಂದಲೂ ಈ ರೀತಿಯಾಗಿರಬಹುದೆಂದು ಸಾರ್ವಜನಿಕರು ತಿಳಿಸುತ್ತಾರೆ. ಅಕ್ರಮ ಮರಳು ಸಾಗಾಣಿಕೆ ನಡೆದರೂ, ಭಾರಿ ವಾಹನಗಳು ಹೋದರೂ ಇಲ್ಲಿ ಯಾರು ಕೇಳೋರಿಲ್ಲ. ಈಗಾಗಲೇ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರ ಅಂಬೋಣವಾಗಿದೆ.
ಮಳೆಗಾಲ ಆರಂಭವಾಗಿರುವುದರಿಂದ ನದಿಯ ಪ್ರವಾಹಕ್ಕೆ ಸೇತುವೆ ಹಾನಿಯಾಗಬಹುದು.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಬಂದು ಪರಿಶೀಲನೆ ಮಾಡಿ, ಸೂಕ್ತ ಕ್ರಮಕೈಗೊಳ್ಳಬೇಕೆಂಬುದು ಅವರ ಗೋಳಾ(ಕೆ) ಗ್ರಾಮಸ್ಥ ನಿಂಗಪ್ಪ ಕನಗನಹಳ್ಳಿ ಒತ್ತಾಯಿಸಿದ್ದಾರೆ.