ಸೇಡಂ: ಯೋಗದ ಮೂಲಕ ಆರೋಗ್ಯವನ್ನು ಸಶಕ್ತವಾಗಿಟ್ಟುಕೊಂಡರೆ, ಆಕ್ಸಿಜನ್ ಕೊರತೆಯನ್ನು ನೀಗಿಸಿಕೊಳ್ಳಲು ಪ್ರಾಣಾಯಾಮ ಮಾಡುವುದು ಅಗತ್ಯವಾಗಿದೆ ಎಂದು ಇಲ್ಲಿಯ ಶ್ರೀ ಹಾಲಪ್ಪಯ್ಯ ವಿರಕ್ತಮಠದ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಜಿ ಹೇಳಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪ್ರಾಣಾಯಾಮ ಎನ್ನುವ ಐದು ದಿನಗಳ ಆನ್‌ಲೈನ್ ಮೂಲಕ ಹಮ್ಮಿಕೊಂಡ ಉಚಿತ ಶಿಬಿರವನ್ನು ಗುರುವಾರ ಬೆಳಿಗ್ಗೆ ದೀಪ ಬೆಳಗಿಸಿ ಉದ್ಘಾಟಿಸಿದ ಅವರು, ಕಲ್ಮಶ ವಾತಾವರಣದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದುಸ್ಸಾಹಸವಾಗಿದೆ. ಸಿಮೆಂಟ್ ಧೂಳಿನ ನಡುವೆಯೂ ಜೀವನ ನಡೆಸುತ್ತಿದ್ದು, ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮತ್ತು ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರಾಣಾಯಾಮ ಉತ್ತಮ ಯೋಗವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿ, ವಿಶ್ವದ ಅನೇಕ ರಾಷ್ಟ್ರಗಳು ಯೋಗ ದಿನವನ್ನು ಆಚರಿಸುತ್ತಿವೆ. ಇದಕ್ಕೆ ಕಾರಣ ಎಂದರೆ, ಭಾರತ ದೇಶ. ಇಲ್ಲಿಯ ಸಂಸ್ಕೃತಿ, ಸಂಸ್ಕಾರ ಮತ್ತು ಯೋಗ ಜಗತ್ತಿನ ಬಹುತೇಕ ದೇಶಗಳು ಅಳವಡಿಸಿಕೊಂಡಿವೆ. ಯೋಗದಿಂದ ಮಾತ್ರ ಜೀವನ ಮತ್ತು ಆರೋಗ್ಯ ಕಾಪಿಟ್ಟುಕೊಳ್ಳಬಹುದು ಎಂದು ಸತ್ಯ ಅರಿವಿಗೆ ಬಂದಿದೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಮಾತನಾಡಿ, ಆರೋಗ್ಯಕ್ಕೆ ಯೋಗ ಮದ್ದು ಎಂದು ಹೇಳಿದರು.
ಆನ್‌ಲೈನ್ ಮೂಲಕ ಯೋಗ ತರಬೇತಿ ನೀಡಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಬನಶಂಕರಿಯ ಯೋಗಶಿಕ್ಷಕರಾದ ಪ್ರವೀಣ್ ಎಸ್.ಮುಗನೂರು ಅವರು ಯೋಗ ಮತ್ತು ಪ್ರಾಣಾಯಾಮದ ಕುರಿತು ಮಾತನಾಡಿದರು. ಜ್ಯೋತಿರ್ಲಿಂಗ ಸ್ವಾಮಿ ವಂದಿಸಿದರು.
ದತ್ತಾತ್ರೇಯ ಐನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಹಾಲಪ್ಪಯ್ಯ ವಿರಕ್ತಮಠ ಸೇಡಂ ವತಿಯಿಂದ ಜೂ. ೧೭ ರಿಂದ ೨೧ ರವರೆಗೆ ಆನ್‌ಲೈನಿನಲ್ಲಿ ಪ್ರಾಣಾಯಾಮದ ತರಬೇತಿ ಶಿಬಿರ ನಡೆಯಲಿದೆ.