ಕುಟುಂಬಕ್ಕೆ ಸೊಂಕು: ಅಣ್ಣನ ಬಳಿಕ ಅಮ್ಮ-ತಮ್ಮ ಬಲಿ!

0
92

ವಾಡಿ: ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡಾದ ಬಂಜಾರಾ ಕುಟುಂಬವೊಂದರ ಐವರು ಸದಸ್ಯರಿಗೆ ಒಕ್ಕರಿಸಿದ್ದ ಹೆಮ್ಮಾರಿ ಕೊರೊನಾ ಸೊಂಕು, ಒಬ್ಬರ ನಂತರ ಒಬ್ಬರನ್ನು ಸಾವಿನ ಮನೆಗೆ ಸಾಗಿಸುತ್ತಿದೆ. ವಾರದ ಹಿಂದಷ್ಟೇ ಪುರಸಭೆ ಸದಸ್ಯ, ಬಿಜೆಪಿ ಮುಖಂಡ ಪ್ರಕಾಶ ನಾಯಕ ಕ್ರೂರಿ ಕೊರೊನಾದಿಂದ ನರಳಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದರು. ಇದಕ್ಕೂ ಮೊದಲು ಅವರ ಪತ್ನಿ ಸಂಗೀತಾಬಾಯಿ ಸೊಂಕಿನಿಂದ ಗುಣಮುಖಳಾಗಿ ಮನೆಗೆ ಬಂದಿದ್ದಾರೆ. ಹೆತ್ತ ತಾಯಿ ಸೇರಿದಂತೆ ಇಬ್ಬರು ಒಡಹುಟ್ಟಿದ ಕಿರಿಯ ಸಹೋದರರು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು.

ಅಣ್ಣ ಪ್ರಕಾಶ ನಾಯಕ ನಿಧನವಾದ ಒಂಬತ್ತು ದಿನಗಳ ಬಳಿಕ ಗುರುವಾರ ಬೆಳಗ್ಗೆ ಸಹೋದರ ಭಜನ್ ನಾಯಕ (೩೫) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ಅಂದು ಸಾಯಂಕಾಲ ಅಮ್ಮ ಚಾಂದಿಬಾಯಿ (೭೬) ಸಾವಿನ ದವಡೆಗೆ ಜಾರಿದ್ದಾಳೆ. ಆಸ್ಪತ್ರೆಯಲ್ಲಿದ್ದ ಕರುಳ ಕುಡಿಗಳ ಮುಖ ನೋಡದೆ ಹೆತ್ತ ಜೀವವೊಂದು ಶಾಶ್ವತವಾಗಿ ಕಣ್ಣು ಮುಚ್ಚಿದ ಹೃದಯವಿದ್ರಾವಕ ಘಟನೆ ನಡೆದು ಸ್ಥಳೀಯರ ಕಣ್ಣಾಲಿ ಒದ್ದೆಯಾಗಿಸಿದೆ.

Contact Your\'s Advertisement; 9902492681

ಸತತ ಸಾವಿನ ಹೊಡೆತ ಕುಟುಂಬ ಸದಸ್ಯರನ್ನು ದುಃಖದ ಮಡುವಿಗೆ ನೂಕಿದೆ. ಇನ್ನೋರ್ವ ಕಿರಿಯ ಸಹೋದರ ಮಹೇಶ ನಾಯಕ (೪೧) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಆರೋಗ್ಯ ಸ್ಥತಿಯೂ ಚಿಂತಾಜನಕವಾಗಿದೆ ಎಂಬುದು ಕುಟುಂಬ ಸದಸ್ಯರಿಂದ ತಿಳಿದುಬಂದಿದೆ. ಮೃತ ಭಜನ್ ನಾಯಕ ಶವವನ್ನು ಗುರುವಾರ ಬೆಳಗ್ಗೆ ಬಂಜಾರಾ ಸಮಾಜದ ಸಂಪ್ರದಾಯದಂತೆ ಅಂತ್ಯಕ್ರೀಯೆ ನೆರವೇರಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ಚಾಂದಿಬಾಯಿ ಅವರ ಅಂತ್ಯಕ್ರೀಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೊದಲು ಹಿರಿಯಣ್ಣ, ನಂತರ ಕಿರಿಯ ಸಹೋದರ, ಆಬಳಿಕ ಹೆತ್ತಮ್ಮ ಹೀಗೆ ಕುಟುಂಬದ ಒಟ್ಟು ಮೂವರು ಕೋವಿಡ್‌ಗೆ ತುತ್ತಾಗಿ ಮಸಣ ಸೇರಿರುವ ಪ್ರಕರಣ ಬಹುಶಃ ರಾಜ್ಯದಲ್ಲೇ ಮೊದಲನೆಯದ್ದು ಎನ್ನಬಹುದೇನೋ. ತಾಂಡಾದ ನಾಯಕರ ಮನೆಯಲ್ಲಿ ಸಂಭವಿಸಿದ ಸರಣಿ ಸಾವಿನ ಘಟನೆಗೆ ಲಂಬಾಣಿ ತಾಂಡಾಗಳು ತಲ್ಲಣಿಸಿವೆ. ಇಡೀ ಕುಟುಂಬವನ್ನೆ ಸರ್ವನಾಶ ಮಾಡಲಕು ನಿಂತ ಮಹಾಮಾರಿಗೆ ಜನರು ಮಣ್ಣು ತೂರುತ್ತಿದ್ದಾರೆ. ಶವಗಳ ಮುಂದೆ ಕುಳಿತ ಕುಟುಂಬ ಸದಸ್ಯರ ಆಕ್ರಂಧನ ಮುಗಿಲು ಮುಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ ನಾಯಕ ಗುಣಮುಖರಾಗಿ ಮನೆಗೆ ಮರಳಲಿ ಎಂದು ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here