ಎಂದೂ ಬಾರದ ಅಪ್ಪ ಇಂದು ಬಂದಿದ್ದ. ಎಂದಿನಂತೆ ಬಸವ ಮಾರ್ಗ ಪತ್ರಿಕೆಗಾಗಿಯೋ ಇಲ್ಲವೇ ಅದೆಂಥದೋ ಪೋಸ್ಟ್ ಮಾಡುವುದಕ್ಕಾಗಿ ಅಡ್ರೆಸ್ ಇರುವ ಕಾಗದದ ತುಣುಕುಗಳನ್ನು ಕತ್ತರಿಯಿಂದ ಕಟ್ ಮಾಡುತ್ತ ಶಹಾಪುರದ ಮನೆಯಲ್ಲಿ ಕುಳಿತಿದ್ದರು.
ಅಪ್ಪ! ಬಸವ ಮಾರ್ಗ ಮತ್ತೆ ಆರಂಭಿಸಿದರೆ ಹೇಗೆ? ಎಂದು ಕೇಳಿದ ನನ್ನ ಪ್ರಶ್ನಗೆ ” ಈ ಮೊದಲು ಒಕ್ಕಲುತನದಲ್ಲಿ ಹೆಚ್ಷಿನ ಲಾಭವಿತ್ತು. ಹೀಗಾಗಿ ಅದರಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ರೇಷ್ಮೆ, ಕಬ್ಬು, ಹೂ ಮುಂತಾದ ಬೆಳೆ ಬೆಳೆದೆ. ಹಾಗೆಯೇ ಕೃಷಿಯಲ್ಲಿ ಅನೇಕ ಹೊಸ ಪ್ರಯೋಗಗಳಿಗೆ ಕೈ ಹಾಕಿದೆ. ಆದರೆ ಬರುಬರುತ್ತ ಅದರಲ್ಲಿ ನಷ್ಟವೇ ಹೆಚ್ಚಾಗತೊಡಗಿತು.
ಈಗ ಬಸವ ಮಾರ್ಗ ಶುರು ಮಾಡಿದರೆ ಒಳ್ಳೆಯದೇನೋ … ಎಂದು ಹೇಳುವಷ್ಟರಲ್ಲಿ ಇನ್ನಾವುದೋ ಬಸ್ಸಿನ ಪ್ರಸಂಗ ತಳಕು ಹಾಕಿಕೊಂಡು ಕನಸಿನಿಂದ ಎದ್ದು ನೋಡುವಷ್ಟರಲ್ಲಿ ಆಗ ಬೆಳಗಿನ 2.29 ನಿಮಿಷ ಸಮಯವಾಗಿತ್ತು.
(18-4-2014ರಂದು ಗುಲ್ಬರ್ಗದ ಗೋದುತಾಯಿ ನಗರದ ಮನೆಯಲ್ಲಿ ).
* ಮತ್ತೊಮ್ಮೆ ನನ್ನ ಮಡದಿಯ ಅಣ್ಣ ಸಿದ್ದು ಪಾಟೀಲ ಗುಜರಾತ ರಾಜ್ಯದ ಬರೋಡಾದಲ್ಲಿ ಫ್ಲ್ಯಾಟ್ ವೊಂದನ್ನು ಖರೀದಿಸಿ ಆ ಮನೆಯ ಪ್ರವೇಶಕ್ಕಾಗಿ ನಮ್ಮನ್ನು ಅಲ್ಲಿಗೆ ಆಹ್ವಾನಿಸಿದ್ದ. ಅಲ್ಲಿಗೆ ತೆರಳಿದ್ದಾಗ ನಾಲ್ಕೈದು ದಿನ ಅಲ್ಲಿಯೇ ಮೊಕ್ಕಾಂ ಹೂಡಿದ್ದೇವು.
ಒಂದಿನ ಅಪ್ಪ ಮತ್ತೆ ಬಂದ. ಅದೇ ಬಸವ ಮಾರ್ಗದ ನೆನಪು ಹೊತ್ತು ತಂದ. ಅಷ್ಟರಲ್ಲಿ ಎಚ್ಚರವಾಯಿತು. ಎದ್ದು ನೋಡಿದರೆ ಹಾಸಿಗೆಯಲ್ಲೇ ಒದ್ದಾಡುತ್ತಿದ್ದೆ.
(2015, ಸಿದ್ದು ಪಾಟೀಲ ಅವರ ಬರೋಡಾದ ಬಾಡಿಗೆ ಮನೆಯಲ್ಲಿ).
* ಪ್ರಜಾವಾಣಿ ಬಿಟ್ಟು ವಿಜಯವಾಣಿ ಸೇರಿದ್ದೆ. ಬಹುಶಃ ಅಪ್ಪ ಈಗ ಇದ್ದಿದ್ದರೆ? ಎಂಬುದು ಆಗ ನನ್ನನ್ನು ಬಹುವಾಗಿ ಕಾಡಿತ್ತು. ಈಗ ಏನು ಮಾಡಬೇಕು? ಎಂದು ಚಿಂತಾಕ್ರಾಂತನಾಗಿದ್ದಾಗ ಎರಡು ಬಾರಿ ಬಂದಿದ್ದ. ಆಗ ನಾನು, ಅಪ್ಪ ಈಗ ಮತ್ತೆ ಬಸವ ಮಾರ್ಗ ಪತ್ರಿಕೆ ಪ್ರಾರಂಭಿಸಿದರೆ ಹೇಗೆ? ಎಂದು ಬಡಬಡಿಸಿದ್ದೆ.
ಅದಕ್ಕೆ ಅಪ್ಪ, ಶುರು ಮಾಡಿದರೆ ಒಳ್ಳೆಯದೇನೋ…!? ಎಂದು ಅರೆ ಮನಸ್ಸಿನಿಂದ ಹೇಳಿದ್ದ. ಅದರಂತೆ ಈಗ ನಾನು ಆರಂಭಿಸಿರುವ ‘ಶರಣ ಮಾರ್ಗ’ ಒಳ್ಳೆಯದೇನೋ..!? ಇದೆ. ಆದರೆ ಅದನ್ನು ಹೊರ ತರಬೇಕಾದರೆ ನಾನು ಪಡುತ್ತಿರುವ ಪಡಿಪಾಟಲು ಯಾರಿಗೂ ಬೇಡ!
ಆದರೂ ಪತ್ರಿಕೆ ಮುಂದುವರೆಸುತ್ತೇನೆ ಏಕೆಂದರೆ ನನ್ನನ್ನೇ ನಂಬಿರುವ ನನ್ನ ಕುಟುಂಬ ಹಾಗೂ ಅಪ್ಪನ ನೆಚ್ಚಿನ ಬಸವ ಪರಿವಾರಕ್ಕಾಗಿ. ಏಕೆಂದರೆ ಅಪ್ಪ ಯಾವಾಗಲೂ ನಮಗೆ ಹೇಳುತ್ತಿದ್ದ ಮತ್ತು ಆ ರೀತಿ ನಡೆದುಕೊಳ್ಳುತ್ತಿದ್ದ “ಎಂತಹ ದೊಡ್ಡ ಸಮಸ್ಯೆ-ಸವಾಲುಗಳು ಬಂದರೂ ಎದೆಗುಂದಬಾರದು. ಆಗಿದ್ದಾಯಿತು. ಅದಕ್ಕೆ ಮುಂದೇನು ಮಾಡಬೇಕು? ಎಂಬುದನ್ನು ಯೋಚಿಸು” ಎಂದು ಹೇಳುತ್ತಿದ್ದ ಈ ಮಾತು ನನ್ನ ಕಿವಿಯಲ್ಲಿ ಸದಾ ರಿಂಗಣಿಸುತ್ತದೆ.
ಅಂತೆಯೇ ಅಪ್ಪನಿಲ್ಲದ ಆ 9 ವರ್ಷ ಅದೇಗೋ ಕಳೆದಿದ್ದೇವೆ. ಆದರೆ ಆತನ ನಿಗೂಢ ಕಣ್ಮರೆ ಮಾತ್ರ ನಮ್ಮ ಕಣ್ಣಂಚಿನಿಂದ ಎಂದಿಗೂ ಮರೆಯಾಗುವುದಿಲ್ಲ. ‘ಅವರು ನನ್ನನ್ನು ಸಾಯಿಸಬಹುದು. ಆದರೆ ನಾನು ಸೋಲುವುದಿಲ್ಲ’ ಎಂಬಂತಿದೆ ಅಪ್ಪನ ಸಾವು. ಇಂದು ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ ನಿಜ! ಅವರ ವಿಚಾರಗಳು ನಮ್ಮೊಂದಿಗಿವೆ.
ಆದರೇನಂತೆ? ಹುಟ್ಟಿದವರು ಒಮ್ಮೆ ಸಾಯಲೇಬೇಕು. ಲೇಸೆನಿಸಿಕೊಂಡು ಐದು ದಿನ, ನಾಲ್ಕು ದಿನ, ಮೂರು ದಿನ, ಎರಡು ದಿನ ಬದುಕಿದರೇನು? ಲೇಸೆನಿಸಿಕೊಂಡು
ಒಂದು ದಿನ ಬದುಕಿದರೆ ಸಾಲದೆ? ‘ಎಮ್ಮವರಿಗೆ ಸಾವಿಲ್ಲ. ಎಮ್ಮವರು ಸಾವನರಿಯರು. ಸಾವೆಂಬುದು ಸಯವಲ್ಲ’ ಎಂಬ ವಚನ ಸಿದ್ಧಾಂತವೇ ನಮ್ಮ ಬದುಕಿನ ಸ್ಫೂರ್ತಿ.