ಶಹಾಬಾದ: ನಗರಸಭೆಯಿಂದ ತ್ಯಾಜ್ಯ ವಿಲೇವಾರಿ ಮಾಡಲು ವಾಹನಗಳನ್ನು ಖರೀದಿಸಲಾಗಿದ್ದು, ವಾಹನಗಳನ್ನು ಮನೆ ಹತ್ತಿರ ಬಂದಾಗ ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ನೀಡಬೇಕೆಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ನಗರಸಭೆಯಿಂದ ೧೪ ನೇ ಹಣಕಾಸು ಯೋಜನೆಯ ಅನುದಾನದಲ್ಲಿ ತ್ಯಾಜ್ಯ ವಿಲೇಮಾಡಲು ಖರೀದಿಸಿದ ನೂತನ ಐದು ವಾಹನಗಳನ್ನು ಉದ್ಘಾಟಿಸಿ ಮಾತನಾಡಿದರು.
ತ್ಯಾಜ್ಯ ವಿಲೇವಾರಿ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ. ನಗರವನ್ನು ಎಷ್ಟೇ ಅಭಿವೃದ್ಧಿ ಮಾಡಿದರೂ ನಗರದಲ್ಲಿ ಎಲ್ಲೆಂದರಲ್ಲಿ ಕಸ ಕಂಡರೆ ಅದು ಅಭಿವೃದ್ಧಿಗೆ ಮಾರಕವಾಗುತ್ತದೆ.ನಗರ ಎಷ್ಟು ಸ್ವಚ್ಛ ಹಾಗೂ ಸುಂದರವಾಗಿರುತ್ತದೆ ಎಷ್ಟೇ ಸಾರ್ವಜನಿಕರು ಆರೋಗ್ಯದಿಂದ ಇರಲು ಸಾಧ್ಯ.ಆದ್ದರಿಂದ ಸಾರ್ವಜನಿಕರು ಕಸವನ್ನು ಮನೆಯ ಮುಂದೆ, ಚರಂಡಿಯಲ್ಲಿ ಎಲ್ಲೆಂದರಲ್ಲಿ ಚೆಲ್ಲದೆ ಪ್ರತಿದಿನ ನಿಮ್ಮ ಮನೆಯ ಮುಂದೆ ಬಂದ ವಾಹನಗಳಿಗೆ ತಾವೇ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡಿ ಎಂದು ಮನವಿ ಮಾಡಿದರು.
ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ನಗರಸಭೆಯಿಂದ ಕಸವನ್ನು ಸಂಗ್ರಹಿಸಲು ಅನುಕೂಲವಾಗುವಂತೆ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿಎರಡು ಭಾಗಗಳಿದ್ದು ಒಂದರಲ್ಲಿಒಣ ಕಸ, ಮತ್ತೊಂದರಲ್ಲಿಹಸಿ ಕಸ ಸಂಗ್ರಹಿಸಲಾಗುತ್ತದೆ. ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆಯು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿ ನಿಮಯದ ಪ್ರಕಾರ ತ್ಯಾಜ್ಯ ಉತ್ಪತ್ತಿ ಮಾಡುವವರೇ ಅದರ ವಿಲೇವಾರಿ ಜವಾಬ್ದಾರಿ ಹೊಂದಿರುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕನು ತಾನು ಉತ್ಪಾದಿಸುವ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಪ್ರತ್ಯೇಕಿಸಿ ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡತಕ್ಕದ್ದು ಎಂದು ಹೇಳಿದರು.
ತಹಸೀಲ್ದಾರ ಸುರೇಶ ವರ್ಮಾ, ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ,ಪರಿಸರ ಅಭಿಯಂತರ ಮುಜಾಮಿಲ್ ಅಲಂ,ಎಇಇ ಪುರುಷೋತ್ತಮ, ನೈರ್ಮಲ್ಯ ನಿರೀಕ್ಷಕರಾದ ಶಿವರಾಜಕುಮಾರ, ರಾಜೇಶ, ಶರಣು, ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾಣೂರ, ನಗರಸಭೆಯ ಸದಸ್ಯರಾದ ಶರಣು ವಸ್ತ್ರದ್, ಡಾ.ಅಹ್ಮದ್ ಪಟೇಲ್, ಭಾಗಿರಥಿ ಗುನ್ನಾಪೂರ, ಪರ್ವಾತಿ ಪವಾರ, ತಿಮ್ಮಬಾಯಿ ಕುಸಾಳೆ, ಸಾಬೇರಾಬೇಗಂ, ರವಿ ರಾಠೋಡ,ಸೂರ್ಯಕಾಂತ ಕೋಬಾಳ,ಬಸವರಾಜ ಮದ್ರಕಿ, ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಸೇರಿದಂತೆ ಅನೇಕರು ಇದ್ದರು.