ಬಾಗಲಕೋಟ: ಜಿಲ್ಲೆಯ ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪೂಜಾ ಅಶೋಕ ಹೆಳವರ ಅವರು 2020-21ನೇ ಸಾಲಿನ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇ. 96.80 ಇಂಗ್ಲಿಷ್ , ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ 100, ಕನ್ನಡ 123, ಗಣಿತ 94, ವಿಜ್ಞಾನ 88 ಅಂಕಗಳನ್ನು ಪಡೆದು ಶಾಲೆಗೆ ಎರಡನೇ ಸ್ಥಾನ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಮುಖ್ಯಗುರುಗಳ ಹಾಗೂ ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲೆಮಾರಿ ಹೆಳವ ಸಮುದಾಯದ ವಿದ್ಯಾರ್ಥಿನಿಯ ಈ ಅದ್ಬುತ ಸಾಧನೆಗೆ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ದಿನನಿತ್ಯ ಮೂರರಿಂದ ನಾಲ್ಕು ತಾಸು ಸತತ ಅದ್ಯಯನ ಮಾಡಿ ವಿಷಯದ ಬಗ್ಗೆ ಮನನ ಮಾಡಿಕೊಳ್ಳುತ್ತಿದ್ದೆ. ಅಂದಿನ ಪಾಠಗಳನ್ನು ಅಂದೇ ಓದಿ ಮುಗಿಸುತ್ತಿದ್ದೆ. ವಿದ್ಯಾಗಮ ತರಗತಿಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನು ಗಮನವಿಟ್ಟು ಕೇಳುತ್ತಿದ್ದೆ, ತಿಳಿಯದ ಕೆಲವು ವಿಚಾರಗಳನ್ನು ಶಿಕ್ಷಕರ ಜೋತೆಗೆ ಹಾಗೂ ಸಹಪಾಠಿಗಳೊಂದಿಗೆ ಚರ್ಚಿಸಿ ತಿಳಿದುಕೊಳ್ಳುತ್ತಿದ್ದೆ.
ಒಂದು ವಿಷಯದ ಪಾಠ ಮುಗಿದ ಮೇಲೆ ಅದಕ್ಕೆ ಸಂಬಂಧಿಸಿದ ಎಲ್ಲಾ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ತಪ್ಪದೇ ಬಿಡಿಸುತ್ತಿದ್ದೆ. ಮಹಾಮಾರಿ ಕರೋನಾ ಸಮಯದಲ್ಲೂ ಕೂಡ ನಾನು ಓದುವುದನ್ನು ಬಿಟ್ಟಿರಲಿಲ್ಲ. ಲಾಕ್ಡೌನ ಸಮಯದಲ್ಲಿ ಎಲ್ಲಾ ವಿಷಯಗಳನ್ನು ಪುನರಾವರ್ತನೆ ಮಾಡಲು ಅನುಕೂಲವಾಯಿತು.
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಪ್ರಮುಖ ಅಂಶಗಳಾದ ಶಿಸ್ತು, ತಾಳ್ಮೆ ಮತ್ತು ಸಮಯ ಪಾಲನೆ ಬಹಳ ಮುಖ್ಯವಾಗಿವೆ. ಶಾಲಾ ಶಿಕ್ಷಕರ ಸಹಕಾರ, ಹೆತ್ತ ತಂದೆ-ತಾಯಿಯ ಪ್ರೋತ್ಸಾಹ ನನ್ನ ಈ ಸಾಧನೆಗೆ ಶ್ರೀರಕ್ಷೆಯಾಯಿತು ಎಂದು ಪ್ರತಿಭಾವಂತ ವಿದ್ಯಾರ್ಥಿನಿ ಪೂಜಾ ಅಶೋಕ ಹೆಳವರ ತಿಳಿಸಿದರು.