ವಾಡಿ: ಸಿನೆಮಾ ಮತ್ತು ನಾಟಕದ ನಂಟು ಬೆಳೆಸಿಕೊಂಡು ಬದುಕು ಸವೆಸಿದ 83 ವಯಸ್ಸಿನ ಹಿರಿಯ ಜೀವವೊಂದು ಮನೆಯ ಪೆಟ್ಟಿಗೆಯಲ್ಲಿ ತಾನೇ ಸಂಗ್ರಹಿಸಿಟ್ಟ ಹಳೆಯ ದಿನಪತ್ರಿಕೆಗಳ ಪುಟಗಳನ್ನು ತೆರೆದು ಕರಾಳ ನೆನಪುಗಳಿಗೆ ಸಾಕ್ಷಿಯಾದರು.
ಪ್ರಧಾನಿ ಇಂಧಿರಾಗಾಂಧಿ ಹೇರಿದ್ದ ತುರ್ತು ಪರಸ್ಥಿತಿಯ ವೇಳೆ ಹೋರಾಟಗಾರರ ಬಂಧನದ ದಿನಗಳನ್ನು ಮೆಲುಕು ಹಾಕಿ ಮರುಗಿದರು.
ಚಿತ್ತಾಪುರ ತಾಲೂಕಿನ ವಾಡಿ ನಗರದ ಜಯದೇವಸ್ವಾಮಿ ಜೋಗಿಕಲ್‍ಮಠ ಎಂಬ ಹಿರಿಯರು 1975ನೇ ಸಾಲಿನ ಜೂನ್ 26ರಂದು ಘಟಿಸಿದ ತುರ್ತು ಪರಸ್ಥಿತಿಯ ಕಾರಳ ದಿನಗಳಲ್ಲಿ ಹೈದರಾಬಾದಿನಿಂದ ಪ್ರಕಟಗೊಂಡ ದಿ ಡೆಕ್ಕೆನ್ ಕ್ರೋನಿಕಲ್ ಎಂಬ ಆಂಗ್ಲ ದೈನಿಕವನ್ನು ನೆನಪಿಗಾಗಿ ಅಂದು ಮನೆಯಲ್ಲಿ ತೆಗೆದಿಟ್ಟಿದ್ದರು. ಬರೋಬ್ಬರಿ 46 ವರ್ಷಗಳ ನಂತರ ಆ ಪತ್ರಿಕೆ ಜೋಗಿಕಲ್‍ಮಠ ಅವರ ಕೈಗೆ ಸಿಕ್ಕಿದೆ. ದೇಶ ಇಂದು 75ರ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದು, ಬಹುತೇಕ ಭಾರತೀಯರು ಆ ಬಿಕ್ಕಟ್ಟಿನ ದಿನಗಳನ್ನು ಮರೆತಿರಬಹುದು. ಆದರೆ ಕೂಡಿಟ್ಟ ಮತ್ತು ಗೆದ್ದಲು ತಿಂದು ಹರಿದು ತುಂಡಾದ ಹಳೆಯ ಪತ್ರಿಕೆಯೊಂದು ಅಂದಿನ ಹಲವು ಕರಾಳ ಘಟನೆಗಳ ಕುರಿತು ಇಂದಿನ ಯುವ ಪೀಳಿಗೆಗೆ ಪ್ರತ್ಯಕ್ಷ ಸಾಕ್ಷಿ ಹೇಳುವಂತಿದೆ.
ಈ ಕುರಿತು ಮಾತನಾಡಿದ ಜಯದೇವಸ್ವಾಮಿ ಜೋಗಿಕಲ್‍ಮಠ, ಇಂಧಿರಾಗಾಂಧಿ ಸರಕಾರವು ತನ್ನ ಕೆಲವು ನಿಯಮಿತ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರಜೆಗಳ ವ್ಯವಹಾರಗಳ ಮೇಲೆ ಕೆಲವು ನಿಯಮಗಳನ್ನು ಜಾರಿಗೆ ತಂದು ನಿಯಂತ್ರಣಗಳನ್ನು ಹೇರಿತ್ತು. ಆ ಸಂದರ್ಭದ ಭಯಾನಕ ಸ್ವಾತಂತ್ರ್ಯ ಹರಣದ ತುರ್ತು ಪರಸ್ಥಿತಿ ಹೋರಾಟಗಾರರ ಮೇಲೆ ಮತ್ತು ಸರಕಾರದ ವಿರುದ್ಧ ದನಿ ಎತ್ತುವ ಜನಗಳ ಮೇಲೆ ಹೇರಲಾಗಿತ್ತು.
ಅದು 1977ರ ಮಾರ್ಚ್ ವರೆಗೆ ಅಂದರೆ 21 ತಿಂಗಳು ಮುಂದುವರೆಯಿತು. ಸಮಾಜವಾದಿ ಪಕ್ಷದ ಜಯಪ್ರಕಾಶ ನಾರಾಯಣ, ಮೊರಾರ್ಜಿದೇಸಾಯಿ, ರಾಜ್ ನಾರಾಯಣ, ಅಶೋಕ ಮೆಹ್ತಾ, ಲಾಲಕೃಷ್ಣ ಅಡ್ಬಾಣಿ, ವಾಜಪೇಯಿಯವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು.
ಸರಕಾರದ ವಿರುದ್ಧ ಮಾತನಾಡಿದವರನ್ನೆಲ್ಲ ಬಂಧಿಸಿ ಸೆರೆಮನೆಗೆ ಕಳುಹಿಸುವ ಸರ್ವಾಧೀಕಾರಿ ಆಡಳಿತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ನಾನಾಗ ಹೈದರಾಬಾದಿನ ಹೆಸರಾಂತ ಜೆಮಿನಿ ಸಿನೆಮಾ ಕಂಪನಿಯಲಿ ಕೆಲಸ ಮಾಡುತ್ತಿದ್ದೆ. ಆಗ ಖರೀದಿಸಿದ ದಿನಪತ್ರಿಕೆಯನ್ನು ಇಂದು ತೆರೆದು ನೋಡಿ ಕ್ಷಣ ದಂಗಾದೆ. ಅಂಥಹ ಭೀಕರ ಪರಸ್ಥಿತಿ ಇಂದೂ ಕೂಡ ನಮ್ಮ ಹಿಂದೆ ಮುಂದೆ ಸುಳಿಯುತ್ತಿದೆ. ಸರ್ವಾಧಿಕಾರಿ ಆಡಳಿತದ ಕ್ರೌರ್ಯ ಅನುಭವಿಸಿದವರಿಗೆ ಗೊತ್ತು ಎಂದು ಪ್ರತಿಕ್ರೀಯಿಸಿ ಆ ದಿನಗಳಿಗೆ ಮನದಲ್ಲೇ ವಿಷಾಧ ವ್ಯಕ್ತಪಡಿಸಿದರು.