ಕಲಬುರಗಿ ಪಾಲಿಕೆ ಚುನಾವಣೆ: ಆಮ್ ಆದ್ಮಿ ಪಕ್ಷದಿಂದ 15 ಭರವಸೆಗಳ ಪ್ರಣಾಳಿಕೆ‌ ಬಿಡುಗಡೆ

0
62

ಕಲಬುರಗಿ:  ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಲ್ಲಿನ ಜನರ ಹಿತಾಸಕ್ತಿ ಕಾಪಾಡಲು ಆಮ್‌ ಆದ್ಮಿ ಪಾರ್ಟಿ ಬದ್ಧವಾಗಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದು, ಇದಕ್ಕಾಗಿ 15 ಬದ್ಧತೆಗಳನ್ನು ಒಳಗೊಂಡ ಗ್ಯಾರೆಂಟಿ ಕಾರ್ಡ್‌ ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿಯವರು, “ಚುನಾವಣೆ ಬಂತೆಂದರೆ ಬೇರೆ ಪಕ್ಷಗಳ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ. ಚುನಾವಣೆ ಗೆದ್ದ ನಂತರ ಅವುಗಳನ್ನು ಈಡೇರಿಸದೇ ಜನರಿಗೆ ಮೋಸ ಮಾಡುತ್ತಾರೆ.

Contact Your\'s Advertisement; 9902492681

ಕಲಬುರ್ಗಿಯ ಜನರು ಈ ರೀತಿ ಅನೇಕ ಸಲ ಮೋಸ ಹೋಗಿದ್ದು, ಇದರಿಂದ ಮಹಾನಗರ ಹಿಂದುಳಿದು ಇಲ್ಲಿನ ಜನರು ಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ನಾವು ಸುಳ್ಳು ಆಶ್ವಾಸನೆಗಳ ಬದಲು 15 ಬದ್ಧತೆಗಳ ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದೇವೆ. ಮನೆಮನೆಯ ಪ್ರಚಾರದ ವೇಳೆ ಇದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಅಧಿಕಾರಕ್ಕೆ ಬಂದೊಡನೆ ಇವುಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.

ಕಲಬುರ್ಗಿ ಸೇರಿದಂತೆ ಇಡೀ ಉತ್ತರ ಕರ್ನಾಟಕವು ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿನ ಸಾವಿರಾರು ಯುವಕರು ಉದ್ಯೋಗವನ್ನು ಹುಡುಕಿಕೊಂಡು ಬೆಂಗಳೂರು ಹಾಗೂ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

ದೇಶದ ಹಾಗೂ ವಿದೇಶದ ಕಂಪನಿಗಳು ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಸಲು, ವ್ಯಾಪಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಾಗಲು ನಗರದ ಮೂಲಸೌಕರ್ಯಗಳು ಅಭಿವೃದ್ಧಿ ಹೊಂದಬೇಕು. ಇದಕ್ಕೆ ಬದ್ಧವಾಗಿರುವ ಎಎಪಿಯನ್ನು ಗೆಲ್ಲಿಸುವ ಮೂಲಕ ಕಲಬುರ್ಗಿ ಜನರು ಜನಪರ ಆಡಳಿತಕ್ಕೆ ನಾಂದಿ ಹಾಡುತ್ತಾರೆ ಎಂದು ದೃಢ ವಿಶ್ವಾಸವಿದೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ಬಹುಜನ ಸಮಾಜ ಪಕ್ಷದ ಜಿಲ್ಲಾ ಹಿರಿಯ ಮುಖಂಡರಾದ ವಸಂತ ಕುಮಾರ್‌ರವರು ತಮ್ಮ ಬೆಂಬಲಿಗರೊಂದಿಗೆ ಇದೇ ಪತ್ರಿಕಾಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡರು.

ಎಎಪಿಯ ಸಹ ಸಂಚಾಲಕ ವಿಜಯ್ ಶರ್ಮಾ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಕಲಬುರಗಿ ಜಿಲ್ಲಾಧ್ಯಕ್ಷ ಜಗದೀಶ್ ಬಳ್ಳಾರಿ, ಜಿಲ್ಲಾ ಉಪಾಧ್ಯಕ್ಷ ಮುಸ್ತಫಾ, ಜಿಲ್ಲಾ ಮುಖಂಡರಾದ ವಸಂತಕುಮಾರ್ ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು.

ಗ್ಯಾರೆಂಟಿ ಕಾರ್ಡ್:
1. ಪ್ರತಿ ಕುಟುಂಬಕ್ಕೆ ತಿಂಗಳಿಗೆ 12,000 ಲೀಟರ್‌ ಉಚಿತ ನೀರು

2. ನಿವಾಸಿ ಆಸ್ತಿಗಳ ಆಸ್ತಿ ತೆರಿಗೆಯಲ್ಲಿ ಇಳಿಕೆ.

3. ಸ್ವಚ್ಛ ಹಾಗೂ ತ್ಯಾಜ್ಯರಹಿತ ನಗರ
– ವಾರ್ಡ್‌ ಮಟ್ಟದಲ್ಲಿ ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ ಸಂಗ್ರಹ ಕೇಂದ್ರಗಳ ಸ್ಥಾಪನೆ ಸೇರಿದಂತೆ ತ್ಯಾಜ್ಯ ವಿಲೇವಾರಿಗೆ ಕ್ರಮ.

4. ಗುಂಡಿಗಳಿಂದ ಮುಕ್ತವಾದ, ವಾಹನ ಸಂಚಾರಕ್ಕೆ ಅನುಕೂಲವಾದಂತಹ, ಪಾದಚಾರಿಸ್ನೇಹಿ ರಸ್ತೆಗಳು:
– ತ್ವರಿತ ಕ್ರಮಕ್ಕಾಗಿ ವಾರ್ಡ್‌ವಾರು ರಸ್ತೆ ರಿಪೇರಿ ಕಾರ್ಯಪಡೆ
– ಬೀದಿ ದೀಪಗಳು, – ಪಾದಚಾರಿಸ್ನೇಹಿ ಪಾದಚಾರಿ ಮಾರ್ಗಗಳು.

5. ಕಟ್ಟಿಕೊಳ್ಳದಂತಹ ಒಳಚರಂಡಿ ವ್ಯವಸ್ಥೆ ಹಾಗೂ ಮಳೆ ನೀರು ಮೋರಿಗಳು – ಕಡ್ಡಾಯ ಮಳೆಕೊಯ್ಲು ಜಾರಿ.

6. ʻಹಸಿರು ಕಲಬುರ್ಗಿʼ ನಿರ್ಮಾಣಕ್ಕಾಗಿ 5 ವರ್ಷಗಳಲ್ಲಿ 1,00,000 ಮರಗಳನ್ನು ಬೆಳೆಸಲಾಗುವುದು.

7. ಭ್ರಷ್ಟಾಚಾರ ರಹಿತ ಪಾಲಿಕೆ, – ಕುಂದುಕೊರತೆಗಳ ಪರಿಹಾರಕ್ಕೆ 24/7 ಸಹಾಯವಾಣಿ.

8. ನಾಗರಿಕ ಸ್ನೇಹಿ ಸೇವೆಗಳು, – ಕಟ್ಟಡ ಯೋಜನೆ ಮಂಜೂರು, ವ್ಯಾಪಾರ ಪರವಾನಗಿ, ಜನನ/ಮರಣ ಪ್ರಮಾಣಪತ್ರ ಮುಂತಾದ ಕೆಎಂಸಿ ಸೇವೆಗಳು ಸಕಾಲದಲ್ಲಿ ಮನೆಬಾಗಿಲಲ್ಲಿ ಲಭ್ಯ, – ಪ್ರತಿ ವಾರ್ಡ್‌ನಲ್ಲೂ ಕಂಪ್ಯೂಟರೀಕೃತ, ಪೂರ್ಣ ಸಜ್ಜುಗೊಂಡಂತಹ, ನಾಗರಿಕಸ್ನೇಹಿ ವಾರ್ಡ್‌ ಕಚೇರಿಗಳು

9. ಉತ್ತಮ ಗುಣಮಟ್ಟದ ವಾಕಿಂಗ್‌ ಟ್ರ್ಯಾಕ್ಸ್‌, ಯೋಗ ಪ್ಲ್ಯಾಟ್‌ಫಾರ್ಮ್‌, ಮಕ್ಕಳ ಆಟಿಕೆ ಅಲಕರಣೆ, ಸಾರ್ವಜನಿಕ ಶೌಚಾಲಯ ಮುಂತಾದವುಗಳನ್ನು ಹೊಂದಿರುವ 100 ಉದ್ಯಾನವನಗಳು.

10. ಕಲಬುರ್ಗಿಯನ್ನು ಪ್ರವಾಸಿ ನಗರವನ್ನಾಗಿಸಲು ಪ್ರವಾಸಿ ತಾಣಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ.

11. ಕಲಬುರ್ಗಿಯ ಯುವಜನತೆಯನ್ನು ಪ್ರೋತ್ಸಾಹಿಸಲು 12 ಅತ್ಯುತ್ತಮ ಗುಣಮಟ್ಟದ ಕ್ರೀಡಾ ಸೌಲಭ್ಯಗಳು.

12. ಗುಣಮಟ್ಟದ ಹಾಗೂ ಉಚಿತವಾದ 20+ ಸರ್ಕಾರಿ ಕ್ಲಿನಿಕ್‌ಗಳು.

13. 20+ ಉಚಿತ ಸರ್ಕಾರಿ ಶಾಲೆಗಳು.

14. ಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಲು 55 ವಾರ-ಮಾರುಕಟ್ಟೆ ಸೌಲಭ್ಯ.

15. ಮೇಲ್ಚಾವಣಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಹೊಂದಿರುವ 100 ಆಟೋರಿಕ್ಷಾ ನಿಲ್ದಾಣಗಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here