ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದೇ ಜೀವನ: ಡಾ. ಸತ್ಯಂಪೇಟೆ

0
70

ಕಲಬುರಗಿ: ಇಂದಿನ ದಿನ ನಿತ್ಯದ ಬದುಕಿನಲ್ಲಿ ನಡೆಯುತ್ತಿರುವ ಆವಾಂತರ, ಧಾವಂತವನ್ನು ನೆನೆಯುತ್ತಿದ್ದರೆ “ಮತ್ತೆ ಕಲ್ಯಾಣ”ದ ಕನಸು ಪ್ರಸ್ತುತ ಅನಿಸುತ್ತದೆ. ಶ್ರೇಷ್ಠ ಮೌಲ್ಯಗಳನ್ನು ರೂಢಿಸಿಕೊಂಡು ಸ್ವಾರ್ಥದ ವರ್ತುಲ ದಾಟಿ ನಿಸ್ವಾರ್ಥದಿಂದ ವಿಶಾಲವಾದ ಸಮಾಜ ಕಲ್ಯಾಣದ ಕಡೆಗೆ ಸಾಗಬೇಕು ಎಂದು ಪತ್ರಕರ್ತ-ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಅಫಜಲಪುರ ತಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಬಡಿಗೇರ ಬಡಾವಣೆಯಲ್ಲಿ ಭಾನುವಾರ ಲಿಂ. ಶಿವಮ್ಮ ಶರಣಪ್ಪ ಅಜಗೊಂಡ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಚನ ದಿನ ಹಾಗೂ ದತ್ತಿ ಕಾರ್ಯಕ್ರಮದಲ್ಲಿ “ವ್ಯಕ್ತಿತ್ವ ವಿಕಾಸದಲ್ಲಿ ವಚನಗಳ ಪಾತ್ರ” ವಿಷಯ ಕುರಿತು ಮಾತನಾಡಿದ ಅವರು, ಸರಳ, ಸಾದಾ, ಸೀದ ಜೀವನ ನಡೆಸಿದ ಶರಣರು ಇದ್ದುದರಲ್ಲಿಯೇ ಸುಖ ಕಂಡರು ಎಂದು ಹೇಳಿದರು.

Contact Your\'s Advertisement; 9902492681

ಅಂತರಂಗ-ಬಹಿರಂಗ, ಒಳ-ಒರಗು ಒಂದಾದಾಗ ಮಾತ್ರ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲಿದ್ದು, ಉತ್ತಮ ಸಂಸ್ಕಾರ, ಆಲೋಚನೆ, ಸೌಜನ್ಯ, ಪರೋಪಕಾರ, ಪ್ರಾಮಾಣಿಕ ದುಡಿಮೆ, ನೈತಿಕತೆ ಮುಂತಾದ ಗುಣಗಳನ್ನು ಅಳವಡಿಸಿಕೊಂಡಲ್ಲಿ ವ್ಯಕ್ತಿತ್ವ ರೂಪುಗೊಳ್ಳಲಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದೇ ಜೀವನ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರ ಮಾತನಾಡಿ, ಶರಣರ ಪರಿವರ್ತನೆಯ ಆಶಯಗಳು ಸಮಾಜದಲ್ಲಿ ಇಂದಿಗೂ ಸಾಧ್ಯವಾಗುತ್ತಿಲ್ಲ. ವ್ಯಕ್ತಿತ್ವ, ಪರಿವರ್ತನೆ ನಮ್ಮಿಂದಲೇ ಶುರುವಾಗಬೇಕು. ವಚನ ಸಂವಿಧಾನ ಹಾಗೂ ಭಾರತದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ವಿವರಿಸಿದರು. ಅತಿಥಿಯಾಗಿದ್ದ ಶರಣ ಸಾಹಿತ್ಯ ಪರಿಷತ್ ಕದಳಿ ಮಹಿಳಾ ವೇದಿಕೆಯ ತಾಲ್ಲೂಕು ಅಧ್ಯಕ್ಷೆ ಪ್ರಭಾವತಿ ಮೇತ್ರಿ, ಕರ್ನಾಟಕ ಕ್ಷತ್ರೀಯ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷಿ ಕಾಳೆ ಮಾತನಾಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಅಮರಗೌಡ ಎಸ್. ಪಾಟೀಲ ಬಸವ ಭಾಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಚಾಂದಕವಟೆ ಪ್ರಾಸ್ತಾವಿಕ ಮಾತನಾಡಿದರು.

ದತ್ತಿ ದಾಸೋಹಿ ಅಣ್ಣಾರಾವ ಅಜಗೊಂಡ, ಯುವ ಮುಖಂಡ ಅರುಣಕುಮಾರ ಉಪ್ಪಿನ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೂಗಾರ, ದಿಲ್‍ಶಾದ ಬಿ. ವಾಹಬ್ ಅಲಿ ವೇದಿಕೆಯಲ್ಲಿದ್ದರು. ರವಿ ಆರ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಅಮರಸಿಂಗ್ ರಜಪೂತ ನಿರೂಪಿಸಿದರು. ಸಿದ್ದು ಶಿವಣಗಿ ಸ್ವಾಗತಿಸಿದರು. ಗೋಪಾಲ ಶರಣರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here