ವಚನ ದರ್ಶನ ಪ್ರವಚನ ಭಾಗ-೨೦

0
10

ಶರಣರ ವಚನಗಳು ತನು ಶುದ್ಧಿಯ ಜೊತೆಗೆ ಮನ ಶುದ್ಧಿಗೆ ಅಷ್ಟೇ ಮಹತ್ವವನ್ನು ಕೊಡುತ್ತವೆ. ನಾವು ಆಧ್ಯಾತ್ಮ ಜೀವನದಲ್ಲಿ ಮುಂದೆ ಸಾಗಬೇಕಾದರೆ ಮನಶುದ್ಧಿ ಅತ್ಯಂತ ಅವಶ್ಯಕವಾದದ್ದು. ನಮ್ಮ ಇಂದ್ರಿಯಗಳಲ್ಲಿ ಮನಸ್ಸು ಪ್ರಧಾನವಾದದ್ದು. ನಮ್ಮ ಮನಸ್ಸು ಹೇಗೆ ಹೇಳುತ್ತದೆಯೋ ಅದನ್ನೆ ಇಂದ್ರಿಯಗಳು ಕ್ರಿಯಾರೂಪದಲ್ಲಿ ತರುತ್ತವೆ. ನಾವು ಮನಸ್ಸಿಗೆ ಸಂಸ್ಕಾರವನ್ನು ಕೊಟ್ಟರೆ ಅದು ಸುಮನವಾಗುತ್ತದೆ. ನಮ್ಮ ಸಕಾರಾತ್ಮಕ ಚಿಂತನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇಂದಿನ ದಿನಮಾನಗಳಲ್ಲಿ ಹೊರಗಿನ ಸಂಶೋಧನೆಯನ್ನು ಬಹುವೇಗವಾಗಿ ನಡೆಯುತ್ತಿವೆ. ಆದರೆ ಅಂತರಂಗ ಸಂಶೋಧನೆಯನ್ನು ಕಡಿಮೆಯಾಗುತ್ತಿದೆ. ನಾವು ಸ್ವಲ್ಪ ನಮ್ಮ ಒಳಗೆ ನೋಡಿಕೊಳ್ಳುವ ಹವ್ಯಾಸವನ್ನು ಬೆಳೆಸಿದರೆ ನಮ್ಮ ಜೀವನ ಸುಖಿಯಾಗುತ್ತದೆ.

ಅಕ್ಕಮಹಾದೇವಿಯವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ. ಲೋಕದ ಚಷ್ಟೇಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ. ಎನ್ನಗುಳ್ಳುದೊಂದು ಮನ ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ? ಲೋಕದ ಕ್ರಿಯೆಗಳಿಗೆ ಸೂರ್ಯನು ಹೇಗೆ ಮುಖ್ಯವಾಗಿರುತ್ತಾನೆಯೋ ಹಾಗೆ ಕರಣಂಗಳ ಕ್ರಿಯೆಗಳಿಗೆ ಮನವೇ ಬೀಜವಾಗಿರುತ್ತದೆ. ನಮ್ಮ ಮನಸ್ಸು ಚಂಚಲವಾಗಿರುತ್ತದೆ. ಆ ಮನಸ್ಸಿಗೆ ನಾವು ಪರಮಾತ್ಮನ ನೆನಹಿನಲ್ಲಿ ಸಿಲುಕಿಸಿದಾಗ ನಮಗೆ ಯಾವುದೇ ಭಯ ಇರುವುದಿಲ್ಲ. ನಮ್ಮ ಮನಸ್ಸು ಪರಮಾತ್ಮನ ಚರಣಕಮಲದಲ್ಲಿ ಲೀನವಾದರೆ, ನಾವು ಭವಸಾಗರವನ್ನು ದಾಟುತ್ತೇವೆ ಎಂದು ಅಕ್ಕಮಹಾದೇವಿ ಹೇಳುತ್ತಾರೆ.

Contact Your\'s Advertisement; 9902492681

ಒಮ್ಮೆ ಒಬ್ಬ ಸ್ವಾಮೀಜಿ ಸಮುದ್ರದ ದಡದಲ್ಲಿ ಓಡಾಡುತ್ತಿರುವಾಗ ಒಂದು ಕಡ್ಡಿ ಸಮುದ್ರದಲ್ಲಿ ಹೋಗಲು ಪ್ರಯತ್ನಿಸುತ್ತಿತ್ತು. ಆ ಕಡ್ಡಿಯನ್ನು ಸಮುದ್ರ ತನ್ನ ಅಲೆಗಳಿಂದ ಹೊರಗೆ ಹಾಕುತ್ತಿರುವುದನ್ನು ಗಮನಿಸಿದ ಸ್ವಾಮೀಜಿ ಸಮುದ್ರಕ್ಕೆ ಪ್ರಶ್ನಿಸುತ್ತಾರೆ. ನೀನು ಎಷ್ಟು ದೊಡ್ಡ ಸಮುದ್ರ ಇದ್ದಿ ಈ ಸಣ್ಣ ಕಡ್ಡಿಗೆ ಒಳಗೆ ಬರಲು ಅವಕಾಶ ಕೊಡಬಾರದೇ ಎಂದು ಕೇಳುತ್ತಾರೆ. ಆಗ ಸಮುದ್ರ ಹೇಳುತ್ತದೆ.

ನಾನು ಮೊದಲು ಸಿಹಿಯಾಗಿದ್ದೆ, ಒಮ್ಮೆ ಉಪ್ಪಿನ ಒಂದು ಹರಳು ಬಂದು ನನಗೆ ನಿಮ್ಮಲ್ಲಿ ಸ್ವಲ್ಪ ಜಾಗ ಕೊಡಿ ಎಂದು ಕೇಳಿತು. ನಾನು ಆಗಲಿ ಎಂದು ಆ ಉಪ್ಪಿನ ಹರಳನ್ನು ನನ್ನ ಜೊತೆಗೆ ಸೇರಿಸಿಕೊಂಡೆ. ಆ ಕಾರಣದಿಂದಲೇ ಇವತ್ತು ನಾನು ಉಪ್ಪಿನೀರಾಗಿದ್ದೇನೆ. ಈಗ ನಾನು ಈ ಕಡ್ಡಿಯನ್ನು ಒಳಗೆ ಬರಲು ಅವಕಾಶ ಮಾಡಿಕೊಟ್ಟರೆ ಅದು ದೊಡ್ಡ ಗುಡ್ಡಗಳಾಗಿ ಬಿಡುತ್ತವೆ. ಆಗ ನಾನೇನು ಮಾಡಲಿ ಗುರುಗಳೇ ಎಂದಿತು. ತಾತ್ಪರ್ಯವೆನೆಂದರೆ, ನಮ್ಮ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇಟ್ಟುಕೊಳ್ಳಬಾರದು.

ಮನಸ್ಸು ಸ್ವಚ್ಛವಾಗಿ, ಶುದ್ಧವಾಗಿ ಇರಬೇಕು. ನಮ್ಮ ಮನಸ್ಸಿನಲ್ಲಿ ಸ್ವಲ್ಪವಾದರೂ ವಿಕಾರಗಳಿಗೂ ಅವಕಾಶ ಕೊಡಬಾರದು. ಸಣ್ಣ ಸಣ್ಣ ವಿಷಯಗಳನ್ನೆ ಮುಂದೆ ದೊಡ್ಡದಾಗಿ ಪರಿಣಮಿಸುತ್ತವೆ. ಹಾಗಾಗಿ ನಾವು ಜಾಗೃತ ವಹಿಸಬೇಕು. ನಮ್ಮ ಮನಸ್ಸು ಶುದ್ಧವಾಗಿ ಇರಬೇಕಾದರೆ ನಾವು ದಿನನಿತ್ಯ ವಚನಪಠಣ, ವಚನಚಿಂತನ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ನಾವು ಶ್ರಾವಣದಲ್ಲಷ್ಟೇ ಪೂಜೆ, ಧ್ಯಾನ, ಆಧ್ಯಾತ್ಮದ ಕಡೆ ಹೆಚ್ಚಿನ ಒಲವು ತೋರಿಸುತ್ತೇವೆ. ಆದರೆ ನಮ್ಮ ಜೀವನವೇ ಶ್ರಾವಣವಾಗಬೇಕು. ನಮ್ಮ ನಿತ್ಯಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು. ಆವಾಗ ನಮ್ಮ ಮನಸ್ಸು ನಿತ್ಯವಾಗಿ ಪರಿಶುದ್ಧವಾಗಿ ಇರುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here