ಸುರಪುರ: ತಾಲೂಕಿನ ದೇವಪುರ ಗ್ರಾಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸೂಗಮ್ಮ ಮಲಕಣ್ಣ ಸಾಹುಕಾರ ಅವಂಟಿ ಅವರು ಹಮ್ಮಿಕೊಂಡಿದ್ದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ನಿಮಿತ್ಯ ಕೊರೊನಾ ವಾರಿಯರ್ಸ್‌ಗಳಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರು ಭೇಟಿ ನೀಡಿ ದೇವಿಯ ದರುಶನ ಪಡೆದುಕೊಂಡರು.ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಬಿಜೆಪಿ ಯುವ ಮುಖಂಡ ಹಣಮಂತ ನಾಯಕ (ಬಬ್ಲುಗೌಡ) ಅವರು ಭಾಗವಹಿಸಿ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಿ ಮಾತನಾಡಿ,ಕೋವಿಡ್ ಸಂದರ್ಭದಲ್ಲಿ ಎಲ್ಲಾ ವಾರಿಯರ್ಸ್‌ಗಳು ತಮ್ಮ ಜೀವದ ಹಂಗನ್ನು ತೊರೆದು ಸೊಂಕಿತರ ಸೇವೆ ಮಾಡಿದ್ದಾರೆ.
ಅಲ್ಲದೆ ಪತ್ರಕರ್ತರು ಕೂಡ ಕೊರೊನಾ ನಿರ್ಮೂಲನೆಯಲ್ಲಿ ಅವಿರತ ಸೇವೆ ಸಲ್ಲಿಸಿದ್ದಾರೆ.ಇವರೆಲ್ಲರ ಶ್ರಮವನ್ನು ಗೌರವಿಸಿ ಇಂದು ಗ್ರಾಮ ಪಂಚಾಯತಿ ಸದಸ್ಯರಾದ ಸೂಗಮ್ಮ ಮಲಕಣ್ಣ ಅವರು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ,ಮತ್ತು ಕರ್ನಾಟಕ ಜನಲಿಸ್ಟ್ ಯೂನಿಯನ್‌ನ ಸುರಪುರ ತಾಲೂಕ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಹಾಗೂ ಛಾಯಾಗ್ರಾಹಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಸಕರ ಸುಪುತ್ರ ಮಣಿಕಂಠ ಗೌಡ ನಾಯಕ ಹಾಗೂ ಉದ್ಯಮಿಗಳಾದ ಬಿ. ಎಂ. ಹಳ್ಳಿಕೋಟಿ ಹಾಗು ದೇವಪುರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀನಿವಾಸ ಗುತ್ತೇದಾರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಮೇಶ ಕವಲಿ, ರಜೀಬಸಾಬ ಮಕಂದರ, ಅಮರೇಶ ಸಾಹುಕಾರ ಅರಳಹಳ್ಳಿ, ನಂದನಗೌಡ ಪಾಟೀಲ,ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ರವಿ ಹುಲಕಲ್,ಅಮರಬಾಬು ಸೇರಿದಂತೆ ಅನೇಕ ಜನ ಗ್ರಾಮಸ್ಥರು ಭಾಗವಹಿಸಿದ್ದರು.