ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್.ವಿ.ನಿಷ್ಠಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ನಂದಿನಿ.ವಿ.ನಿಷ್ಠಿ ಅವರು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಹಾಗೂ ಇತ್ತೀಚೆಗೆ ನಿಧನರಾದ ಪೂಜ್ಯ ಬಸವರಾಜಪ್ಪ ಅಪ್ಪಾಜಿ ಅವರಿರ್ವರ ಹೆಸರಿನಲ್ಲಿ ಎರಡು ಅಧ್ಯಯನ ಪೀಠ ಸ್ಥಾಪಿಸಲು ತಲಾ ೧೦ ಲಕ್ಷ ರೂ. ನೀಡಿದರು.
ಶುಕ್ರವಾರ ಕಲಬುರಗಿ ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ಅದ್ದೂರಿಯಾಗಿ ನಡೆದ ಶರಣಬಸವ ವಿಶ್ವವಿದ್ಯಾಲಯದ ಮೊದಲ ಮತ್ತು ಎರಡನೇ ಘಟಿಕೋತ್ಸವದಲ್ಲಿ ವಿವಿಯ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಈ ಘೋ?ಣೆಯನ್ನು ಮಾಡಿದರು. ಡಾ.ನಿಷ್ಠಿ, ವಿಶ್ವವಿದ್ಯಾಲಯದಲ್ಲಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅಧ್ಯಯನ ಪೀಠ ಸ್ಥಾಪನೆಗೆ ೧೦ ಲಕ್ಷ ರೂ. ಮತ್ತು ಶ್ರೀಮತಿ ನಂದಿನಿ.ವಿ.ನಿಷ್ಠಿ ಅವರು ಪೂಜ್ಯ ಲಿಂ.ಬಸವರಾಜಪ್ಪ ಅಪ್ಪಾಜಿ ಅಧ್ಯಯನ ಪೀಠ ಸ್ಥಾಪಿಸಲು ೧೦ ಲಕ್ಷ ರೂ. ನೀಡಿದರು.
ಶರಣಬಸವ ವಿಶ್ವವಿದ್ಯಾಲಯದ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಪೂಜ್ಯ ಡಾ ಅಪ್ಪಾಜಿ, ಆರು ಪ್ರಮುಖ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿದರು – ಮೊದಲ ಘಟಿಕೋತ್ಸವದಲ್ಲಿ ಪ್ರಖ್ಯಾತ ಶಿಕ್ಷಣ ತಜ್ಞ ಮತ್ತು ಮಾಜಿ ಸಚಿವ ಶ್ರೀ ಶ್ಯಾಮನೂರು ಶಿವಶಂಕರಪ್ಪ, ಪ್ರಖ್ಯಾತ ನ್ಯಾಯವಾದಿ ಮತ್ತು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಶ್ರೀ ಶಿವರಾಜ ವಿ ಪಾಟೀಲ ಮತ್ತು ಮಾಜಿ ಸಂಸದ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ ಸೇಡಂ ಅವರಿಗೆ ಗೌರವ ಡಾಕ್ಟರೇಟ್ ನೀಡಿದರು.
ಎರಡನೇ ಘಟಿಕೋತ್ಸವದಲ್ಲಿ ಸಮಾಜಮುಖಿ ಸೇವೆ ಮತ್ತು ಧರ್ಮ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಚೌಡಾಪುರಿ ಹಿರೇಮಠದ ಪೂಜ್ಯ ಶ್ರೀ ರಾಜಶೇಖರ ಶಿವಾಚಾರ್ಯರು, ಕೈಗಾರಿಕೋದ್ಯಮಿ ಶ್ರೀ ಲಿಂಗರಾಜ ಸಾತಲಿಂಗಪ್ಪ ಪಾಟೀಲ ಹಾಗೂ ಶಾಸಕ ಮತ್ತು ಕೈಗಾರಿಕೋದ್ಯಮಿ ಶ್ರೀ ಬಿ.ಜಿ.ಪಾಟೀಲ ಸೇರಿದಂತೆ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿದರು. ಇದೇ ಸಂದರ್ಭದಲ್ಲಿ ಡಾ ಶಿವರಾಜ ಶಾಸ್ತ್ರಿ ಹೇರೂರು, ಡಾ ನೀಲಾಂಬಿಕಾ ಶೇರಿಕಾರ ಪೊಲೀಸ್ ಪಾಟೀಲ ಮತ್ತು ಡಾ ಎಸ್ ಎಂ ಹಿರೇಮಠ ಅವರಿಗೆ ವಿವಿಯ ಘಟಿಕೋತ್ಸವದಲ್ಲಿ ಡಿ.ಲಿಟ್ ಪದವಿಗಳನ್ನು ಪ್ರದಾನ ಮಾಡಲಾಯಿತು.
೨೦೧೭-೧೮ನೇ ಬ್ಯಾಚ್‌ನ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೨೦ ಚಿನ್ನದ ಪದಕಗಳನ್ನು ನೀಡಲಾಯಿತು. ಮೊದಲ ಘಟಿಕೋತ್ಸವದಲ್ಲಿ ೩೫೨ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಯಿತು. ಹಾಗೂ ೨೦೧೮-೧೯ನೇ ಬ್ಯಾಚ್‌ನ ೨೨ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು ಮತ್ತು ಎರಡನೇ ಘಟಿಕೋತ್ಸವದಲ್ಲಿ ೫೨೭ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಯಿತು.
ಸಾರಂಗಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಮಾತನಾಡಿದರು. ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಚೇರಪರ್ಸನ್‌ರಾದ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಿಣಿ ಅವ್ವಾಜಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಶಶೀಲ.ಜಿ.ನಮೋಶಿ (ಎಂ.ಎಲ್.ಸಿ), ಉಪಕುಲಪತಿ ಪ್ರೊ ವಿಡಿ ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಅವರು ಘಟಿಕೋತ್ಸವದ ಪ್ರಾರಂಭದ ಮೊದಲು ನಡೆದ ಘಟಿಕೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕುಲಸಚಿವ (ಮೌಲ್ಯಮಾಪನ) ಡಾ ಲಿಂಗರಾಜ ಶಾಸ್ತ್ರೀ ಬೆಳ್ಳಿಯ ಗದೆ ಹೊತ್ತು ಮೆರವಣಿಗೆಯಲ್ಲಿ ಮೊದಲಿಗರಾಗಿ ಹೆಜ್ಜೆ ಹಾಕಿದರು. ಇದರಲ್ಲಿ ಕುಲಾಧಿಪತಿ, ಕುಲಪತಿ, ಉಪಕುಲಪತಿ, ಕುಲಸಚಿವರು ಸೇರಿದಂತೆ ಎಲ್ಲಾ ವಿಭಾಗಗಳ ಡೀನ್‌ರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.