ರಾಜಕಾರಣಿಗಳ ಐಲಾಗಳೂ ಮತ್ತು ಸಮಾಜವೂ

1
167

ಎಮ್ಮೆಗೊಂದು ಚಿಂತೆ;
ಸಮಗಾರಗೊಂದು ಚಿಂತೆ.
ಧರ್ಮಿಗೊಂದು ಚಿಂತೆ;
ಕರ್ಮಿಗೊಂದು ಚಿಂತೆ.
ಎನಗೆ ಎನ್ನ ಚಿಂತೆ,
ತನಗೆ ತನ್ನ ಕಾಮದ ಚಿಂತೆ.
ಒಲ್ಲೆ ಹೋಗು, ಸೆರಗ ಬಿಡು ಮರುಳೆ.
ಎನಗೆ ಚೆನ್ನಮಲ್ಲಿಕಾರ್ಜುನದೇವರು
ಒಲಿವರೊ ಒಲಿಯರೊ ಎಂಬ ಚಿಂತೆ !

ಎಂಬ ಅಕ್ಕಮಹಾದೇವಿಯ ವಚನದಂತೆ ಕರ್ನಾಟಕದ ಸಮಗ್ರ ಜನತೆಗೆ ಮಳೆ ಆಗುತ್ತಿಲ್ಲ ಎಂಬ ಚಿಂತೆ ಇದ್ದರೆ ಈ ಹಡಬಿ ರಾಜಕಾರಣಿಗಳಿಗೆ ತಮ್ಮ ಖುರ್ಚಿಯ ಚಿಂತೆ ಹತ್ತಿದೆ. ಯಾರು ಖರೀದಿ ಮಾಡುತ್ತಾರೋ ! ಇನ್ನಾರು ಖರೀದಿಸುತ್ತಾರೋ ? ಎಂಬುದು ಮುಖ್ಯವಲ್ಲ. ಯಾವ ಪಕ್ಷ ಅಧಿಕಾರದಿಂದ ಕೆಳಗೆ ಇಳಿಯುತ್ತದೋ ಇನ್ನಾವುದು ಅಧಿಕಾರಕ್ಕೆ ಏರುತ್ತಾರೋ ? ಎಂಬುದು ಜನ ಸಾಮಾನ್ಯರಿಗೆ ಅಮುಖ್ಯ.

Contact Your\'s Advertisement; 9902492681

ಮಳೆಗಾಲದಲ್ಲಿ ಮಳೆ ಅಪೇಕ್ಷಿಸಿದರು ಬರುತ್ತಿಲ್ಲ. ಬೀಜಗಳನ್ನು ಭೂಮಿಗೆ ಬಿತ್ತಬೇಕೆಂದರೆ ಅದು ಕನಿಷ್ಠ ತೇವಾಂಶವೂ ಹೊಂದಿಲ್ಲ. ಬೀಜ ಬಿತ್ತದೆ ಬೆಳೆಯದೆ ಫಲ ನಿರೀಕ್ಷಿಸಲು ಸಾಧ್ಯವೆ ? ರೈತ ನಿತ್ಯ ಮೋಡ ನೋಡುತ್ತ ಕುಳಿತ್ತಿದ್ದಾನೆ. ತುಂಬು ಬಸುರಿಯಂತೆ ಕಡುಗಪ್ಪಗೆ ಮುಗಿಲಲ್ಲಿ ಓಡಾಡುವ ಮೋಡ ಇನ್ನೇನೋ ನೆಲಕ್ಕೆ ಸುರಿದೆ ಬಿಟ್ಟಿತು ಎಂದು ನಿರೀಕ್ಷಿಸುವಂತೆ, ಸುಯ್ಯನೆ, ಬರ್ರನೆ ಬೀಸುವ ಗಾಳಿ ಆ ಮೋಡಗಳನ್ನು ಹೊತ್ತುಕೊಂಡು ಹೋಗುತ್ತದೆ.

ರೈತ ನಿರಾಶೆಯಿಂದ ಕೈಚೆಲ್ಲುತ್ತಾನೆ. ಹತಾಶೆಯಿಂದ ನಿಡುಸುಯ್ಯುತ್ತಾನೆ. ಮಗಳ ಮದುವೆಗೆಂದು ಹೋದ ವರ್ಷ ಮಾಡಿದ ಸಾಲ ಹೇಗೆ ತೀರಿಸಬೇಕು ? ಬೆಳೆ ಬರಬಹುದೆಂಬ ಭರವಸೆಯಿಂದ ಬಟ್ಟೆ ಅಂಗಡಿಯಲ್ಲಿ ಮಾಡಿದ ಉದ್ರಿ ಕೊಡುವುದು ಯಾವಾಗ ? ನಿತ್ಯದ ದಿನಸಿ ಅಂಗಡಿಯ ಮಾಲಿಕ‌ಹೋಗಿತ್ತ ಬರುತ್ತ ಹಣ ಕೇಳುತ್ತಾನೆ ! ಇವರೆಲ್ಲರಲ್ಲಿ ಬಾಕಿ ಇದೆ. ಕೊಡುವುದು ಯಾವಾಗ ? ಎಂಬ ಚಿಂತೆ ಹಗಲು ರಾತ್ರಿ ಬೇತಾಳದಂತೆ ಕಾಡಿ ರಾತ್ರಿ ನಿದ್ದೆ ಮಾಡಿ ಎಷ್ಟೋ ವರ್ಷಗಳಾದವು.

ನಿರಾಶೆಯ ಬದುಕು ದೂಡಬಾರದೆಂದು ಬತ್ತಾಯದ ನಗುವಿನ ಮುಖ ತಂದುಕೊಂಡು ಆ ಈ ದೇವರಿಗೂ ಹೋಗಿ ಬಂದದ್ದೂ ಇದೆ. ಆದರೆ ಯಾವ ದೇವರೂ ಫಲ ಕೊಡಲಿಲ್ಲ. ಇದ್ದಷ್ಟು ಆತನು ಕಿತ್ತುಕೊಂಡ. ಆಕಾಶ ನಿರಾಶೆ ಮೂಡಿಸಿದರೆ, ವಾಸ್ತವ ಚೈತನ್ಯವನ್ನು ಕಿತ್ತು ತಿನ್ನುತ್ತಿದೆ. ಹೊಲದಲ್ಲಿ ಕೆಲಸ ಮಾಡಿದ ಕೂಲಿಕಾರರಿಗೂ ಕೂಲಿ ಹಣ ಕೊಡದ ದೈನಸಿ ಸ್ಥಿತಿಗೆ ರೈತ ಇಳಿದಾಗಿದೆ.

ರೈತನನ್ನು ಆಶ್ರಯಿಸಿದ ಕೂಲಿಕಾರರು, ಸಣ್ಣ ಪುಟ್ಟ ದಿನಸಿ ವ್ಯಾಪಾರಿಗಳ ಸ್ಥಿತಿ ವರ್ಣಿಸಲಾಗದು. ಪಟ್ಟದಲ್ಲಿಯೂ ಕೂಡ ಮಳೆ ಇಲ್ಲದೆ ಬೋರಗಳು ಬತ್ತಿ ಹೋಗಿವೆ ! ಹನಿ ನೀರಿಗೂ ತತ್ವಾರದ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿದ್ದ ಇದ್ದ ಬದ್ದ ಕೆರೆಗಳು ಯಾರು ಇನ್ನಾರದೋ ಒತ್ತಡದಿಂದ ಲೇ ಔಟ್ ಗಳಾಗಿವೆ. ಹಲವು ಕೆರೆಗಳಲ್ಲಿ ಊಳು ತುಂಬಿ, ನೀರೇ ಇಲ್ಲ. ವಿಚಿತ್ರವೆಂದರೆ ಕೆರೆಯನ್ನು ನಾಲ್ಕಾರುಬಾರಿ ಊಳೆತ್ತಿದ್ದು ಸರಕಾರಿ‌ ಕಡತಗಳಲ್ಲಿ ದಾಖಲೆಯಾಗಿದೆ ! ಎಲ್ಲರೂ ಕಳ್ಳರು, ಖದೀಮರು ಸೇರಿಯೇ ಸರಕಾರದ ಖಜಾನೆಗೆ ಖನ್ನ ಹಾಕಿದ್ದಾರೆ.

ಯುವಕರು ನೈತಿಕತೆ ಬಿಟ್ಟು ಅನೈತಿಕ ಚಟುವಟಿಕೆಗಳಲ್ಲಿ ಪಾಲುದಾರಾಗುತ್ತಿದ್ದಾರೆ. ಮೊಬೈಲ್ ಎಂಬ ಅಲಾವುದ್ಧಿನನ ಅದ್ಭುತ ದೀಪ ಅವರನ್ನು ದಾರಿ ತಪ್ಪಿಸುತ್ತಿದೆ. ಹುಸಿ ದೇಶ ಭಕ್ತಿಯ ರೋಗ ಇವರನ್ನು ಆವರಿಸಿದೆ, ಭ್ರಾಮಕ ಲೋಕದಲ್ಲಿ ಓಲಾಡುತ್ತಿದ್ದಾರೆ. ಇವರಿಗೆ ಪರಿಸರದ, ಸಮಾಜದ, ಧಾರ್ಮಿಕ, ರಾಜಕೀಯ ಪ್ರಜ್ಞೆ ಇಲ್ಲದೆ ಜೀವಂತ ಶವವಾಗುತ್ತಿದ್ದಾರೆ.

ಇವರೆಲ್ಲರಿಗೂ ಸರಿ ದಾರಿಗೆ ತರಬಹುದಾದ ಮಾಧ್ಯಮ ಇಂದು ಉದ್ಯಮಿಗಳ ಕೈಗೊಂಬೆ. “ವ್ಯಾಪಾರಂ ದ್ರೋಹ ಚಿಂತನಂ” – ಎಂಬಂತೆ ಆತ ತನ್ನ ಬಗೆಗೆ ಮಾತ್ರ ಯೋಚಿಸಬಲ್ಲ, ಇನ್ನಾರ ಗೋಳೂ ಅವನಿಗೆ ಕೇಳಿಸದು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಬೋಧಿಸಬೇಕಾದ ಮಾಧ್ಯಮ ಇಂದು ಲಜ್ಜೆಗೆಟ್ಟು ವರ್ತಿಸುತ್ತಿದೆ. ನೀಚ ರಾಜಕಾರಣಿಗಳ ಬಾಲಂಗೋಸಿಯಾಗಿ, ಅಧಾರ್ಮಿಕ ಭಯೋತ್ಪಾದಕರಿಗೆ ಮಣೆ ಹಾಕಿ ತನ್ನ ಕರ್ತವ್ಯ ಮರೆತು ಬಿಟ್ಟಿದೆ. ಇದ್ದಲಿ ಮಸಿಗೆ ಬುದ್ದಿ ಹೇಳುವ ಸ್ಥಿತಿತೆ ತನ್ನನ್ನು ಒಡ್ಡಿಕೊಂಡಿದೆ.

ಬೆಂಕಿ ಬಿದ್ದ ಮನೆಯ ಬಗೆಗೆ ಯಾರಿಗೂ ಕಾಳಜಿ ಇಲ್ಲ. ಪರಿಸರದ ಕೂಸಾದ ಮಾನವ, ಪರಿಸರ ಉಳಿದರೆ ನಾವೂ ಉಳಿಯುತ್ತೇವೆ ಎಂಬ ಅರಿವು ತುಂಬುತ್ತಿಲ್ಲ. ಅರಣ್ಯವನ್ನು ಇಂಚಿಂಚು ಮುಕ್ಕಿ ಬಿಟ್ಟಿದ್ದೇವೆ. ಕಾಡಿನ ಪ್ರಾಣಿಗಳು ನಿತ್ಯವೂ ನಾಡಿನಲ್ಲಿ ಕಾಣುತ್ತಿವೆ. ಬರೀ ಕಾಂಕ್ರಿಟ್ ಕಾಡು ನಿರ್ಮಿಸುವುದೆ ನಾಗರಿಕತೆ ಎಂದು ತಿಳಿದುಕೊಂಡಿದ್ದೇವೆ.

ದುಡ್ಡು ಬೇಕು, ದುಡ್ಡೇ ಎಲ್ಲಾ ಅಲ್ಲ. ಆದರೆ ಲಜ್ಜೆಗೆಟ್ಟ ರಾಜಕಾರಣಿಗಳು ಇಂದು ಮಾಡುತ್ತಿರುವುದು ಏನು ? ಜನರ ಏಳ್ಗೆಗಾಗಿ ಪ್ರತಿನಿಧಿಯಾದ ಇವರು ಕೋಟ್ಯಂತರ ರೂಪಾಯಿಗಳಿಗೆ ತಮ್ಮನ್ನು ಮಾರಿಕೊಂಡು ಮತದಾರನಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕುರಿತು ಯಾವೊಬ್ಬ ಮಾಧ್ಯಮ ಪ್ರತಿನಿಧಿಯೂ ಕ್ಯಾಕರಿಸಿ ಉಗುಳುತ್ತಿಲ್ಲ. ಅವರ ಕುದುರೆ ವ್ಯಾಪಾರವನ್ನು ಅತಿ ರಂಜಿತವಾಗಿ ಹೊಗಳಿ, ಅವರ ಘನ ಕಾರ್ಯವನ್ನು ಬಣ್ಣಿಸುತ್ತಿವೆ.

ಉಪ್ಪು ತನ್ನ ರುಚಿ ಕಳಕೊಂಡರೆ ಏನು ಮಾಡುವುದು ?

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here