ಸೇಡಂ: ಅವಸಾನದ ಅಂಚಿನಲ್ಲಿ ಇರುವ ಬಯಲಾಟ ಮತ್ತೆ ಮರು ಹುಟ್ಟು ಪಡೆದು ವಿಜೃಂಭಿಸಲಿ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ಆಶಿಸಿದರು.
ಸೇಡಂನ ಕಾನಾಗಡ್ಡಾ ಕಲ್ಯಾಣ ಮಂಟಪದಲ್ಲಿ ಕಲಬುರಗಿ ರಂಗಾಯಣದ ಕಲಾವಿದರು ಮಂಗಳವಾರ ಪ್ರದರ್ಶಿಸಿದ ರಾಮ ರಾವಣರ ಯುದ್ಧ ಎಂಬ ಬಯಲಾಟಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ರಂಗಾಯಣ ಕಲಬುರಗಿ ಈಗ ನಾಡಿನಾದ್ಯಂತ ಗಮನ ಸೆಳೆಯುತ್ತಿದ್ದು, ಈ ಹಿಂದೆ ಯುಗಾದಿ ನಾಟಕೋತ್ಸವವನ್ನು ಸೇಡಂನಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದು ಕಲಾಪ್ರೇಮಿಗಳ ನೆನಪಿನಲ್ಲಿದೆ. ಆಧುನಿಕ ನಾಟಕಗಳ ಭರಾಟೆಯಲ್ಲಿ ಜಾನಪದ ಕಲಾಪ್ರಕಾರ ಕಣ್ಮರೆಯಾಗದಂತೆ ನೋಡಿ ಕೊಳ್ಳುವ ರಂಗಾಯಣದ ನಿರ್ದೇಶಕರ ಅಭಿಲಾಷೆ ಶ್ಲಾಘನೀಯ ಎಂದರು.
ಮೃದಂಗ ನುಡಿಸುವ ಮೂಲಕ ಪ್ರದರ್ಶನ ಉದ್ಘಾಟಿಸಿದ ಅಖಿಲ ಭಾರತ ವಿಕಾಸ ಸಂಗಮದ ಜಿಲ್ಲಾ ಸಂಯೋಜಕರಾದ ಪಿ. ಭೀಮರೆಡ್ಡಿ ಮಾತನಾಡಿ, ಗ್ರಾಮೀಣ ಜನರ ಏಕೈಕ ಮನರಂಜನೆ, ಮಾಹಿತಿ ಮತ್ತು ಜ್ಞಾನ ನೀಡುವ ಕಲೆಯಾದ ಬಯಲಾಟವನ್ನು ವಿದ್ಯಾವಂತರು ಅಭಿನಯಿಸಿದ್ದು ಅತ್ಯಂತ ಖುಷಿ ಕೊಡುವ ಸಂಗತಿ ಎಂದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಅ.೨೬ರಿಂದ ನವೆಂಬರ್ ೧ರ ವರೆಗೆ ರಂಗಾಯಣದ ಸಭಾಂಗಣದಲ್ಲಿ ’ ಕನ್ನಡ ರಂಗ ರಾಜ್ಯೋತ್ಸವ ’ ಆಚರಿಸಲು ನಿರ್ಧರಿಸಿದೆ. ಒಂದು ವಾರ ಪ್ರತಿದಿನ ಒಂದು ನಾಟಕ ಪ್ರದರ್ಶನ ಮಾಡಲಾಗುವುದು ಹಾಗೂ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಹಾಗೂ ಶರಣಪ್ಪ ಪರಮಣ್ಣ ಕಾನಾಗಡ್ಡಾ ಟ್ರಸ್ಟ್ ಸಂಯುಕ್ತವಾಗಿ ಪ್ರದರ್ಶನವನ್ನು ಆಯೋಜಿಸಿದ್ದವು. ವಿಕಾಸ ಅಕಾಡೆಮಿ ಜಿಲ್ಲಾ ಸಂಯೋಜಕ ಶಂಕರ ಸುಲೇಗಾಂವ್ ಸ್ವಾಗತಿಸಿದರು. ಕಾನಾಗಡ್ಡಾ ಟ್ರಸ್ಟ್ ಕೋಶಾಧ್ಯಕ್ಷರಾದ ಸಿದ್ದಪ್ಪ ತಳ್ಳಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಜಂಟಿ ಕಾರ್ಯದರ್ಶಿ ಡಾ.ಸದಾನಂದ ಬೂದಿ ವಂದಿಸಿದರು. ಸಾಹಿತಿ ಜಗನ್ನಾಥ ತರನಳ್ಳಿ ನಿರೂಪಿಸಿದರು.