- ರಾಜಕುಮಾರ ದಣ್ಣೂರ
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ೬೬ ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಬಹಳ ವಿಭಿನ್ನವಾಗಿ ಆಚರಣೆ ಮಾಡುವ ಮೂಲಕ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ದೇಸಿ ಪರಂಪರೆಯನ್ನು ಇಂದು ಅನಾವರಣಗೊಳಿಸಲಾಯಿತು.
ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪ್ರೊ. ದಯಾನಂದ ಅಗಸರ್ ಅವರು ಅಪ್ಪಟ ದೇಸಿ ಉಡುಪು ದೋತಿ ಮತ್ತು ನೇರುಸೇಟ್ ಉಡುಪಿನಲ್ಲಿ ಕಾಣಿಸಿಕೊಂಡರೆ ಅದೇ ಉಡುಪಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಟಿ. ಫೋತೆ ಮತ್ತು ಅವರ ವಿಭಾಗದ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ದೇಸಿಯ ಉಡುಪಿನಲ್ಲಿ ಲವಲವಿಕೆಯಿಂದ ಕಾರ್ಯ ಸೌಧದಿಂದ ಕನ್ನಡ ವಿಭಾಗದ ವರೆಗೆ ವಿಶ್ವವಿದ್ಯಾಲಯದ ಕುಲಪತಿಯನ್ನು ಸಾಲು ಸಾಲಾಗಿ ಸ್ವಾಗತದ ಮೂಲಕ ಕನ್ನಡ ವಿಭಾಗಕ್ಕೆ ಕಾಲು ನಡಿಗೆಯಲ್ಲಿ ಕರೆದುಕೊಂಡು ಹೋಗಿ ಕನ್ನಡ ವಿಭಾಗದಲ್ಲಿ ಇರುವ ಕಲ್ಯಾಣ ಕರ್ನಾಟಕ ಸಾಹಿತಿಗಳ ಭಾವಚಿತ್ರ ಹಾಗೂ ನಾಡಿನ ಹಿರಿಯ ಸಾಹಿತಿಗಳ ಭಾವಚಿತ್ರ ಸಾಹಿತ್ಯದ ಕೃತಿಗಳನ್ನು ಪರಿಚಯಮಾಡಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕ್ಯಾಂಪಸ್ ಅಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿನಿಯರು ಇಳಕಲ್ ಸೀರೆ ಕುಪ್ಪಸ ತೊಟ್ಟು ಸಿಂಗಾರಗೊಂಡು ಮದುವೆ ಮಂಟಪದಲ್ಲಿ ಓಡಾಡಿದಂತೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಇವರ ಉಡುಗೆಯನ್ನೇ ದಿಟ್ಟಿಸಿ ನೋಡಿ ನಾಚಿದಂತೆ ಕಂಡು ಬಂತು.
ಒಂದೆಡೆ ಸೆಲ್ಫಿ ಕ್ಲಿಕ್ಕಿಸುವ ವಿದ್ಯಾರ್ಥಿನಿಯರು, ಮತ್ತೊಂದೆಡೆ ಕೊರಳಲ್ಲಿ ಆಭರಣ, ಕೆದರಿದ ತಲೆಗೂದಲು ಸರಿಪಡಿಸಿ ನಾಜೂಕು ಪ್ರದರ್ಶಿಸುವ ಬೆಡಗಿಯರು. ಮಗದೊಂದೆಂಡೆ ಹಸಿರು ಪಟ್ಟೆಯ ಇಳಕಲ್ ಸೀರೆಗಳ ತೋಪ ಸೆರಗಿನ ಮ್ಯಾಲೆ ಬಣ್ಣದ ಚಿತ್ತಾರಗಳ ಕುಪ್ಪಸ ತೊಟ್ಟು ಬಿಸಿಲಿಗೆ ಬೆನ್ನುಕೊಟ್ಟು ಕಿರುನಗೆ ಬೀರುವಂತಹ ಚೆಂದುಳ್ಳಿ ಚೆಲುವೆಯರು.
ಮತ್ತೊಂದೆಡೆ ಬೆಡಗಿಯರಿಗಿಂತ ತಾವು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವಂತೆ ರೇಷ್ಮೆ ಲುಂಗಿ, ಧೋತಿ, ಜುಬ್ಬಾ ತೊಟ್ಟು, ತಲೆ ಮೇಲೆ ಗಾಂಧಿ ಟೋಪಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ತಮಟೆ ಬಾರಿಸುತ್ತ ಹೆಜ್ಜೆ ಹಾಕುವ ಯುವಕರು. ಫ್ಯಾಶನ್ ಜಗತ್ತಿಗೆ ಮಾರು ಹೋದ ಯುವ ಸಮುದಾಯಕ್ಕೆ ಈಗೇನಿದ್ದರೂ ಜೀನ್ಸ್ ಪ್ಯಾಂಟ್, ಟೀ ಶರ್ಟ್‌ಗಳೇ ಅಚ್ಚುಮೆಚ್ಚು. ದೇಸಿ ಉಡುಗೆ-ತೊಡುಗೆ ತನ್ನ ವೈಭೋಗ ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ನೂರಾರು ವಿದ್ಯಾರ್ಥಿಗಳ ದೇಸಿ ಸಾಂಪ್ರದಾಯಿಕ ಉಡುಗೆ ಸೀರೆಯುಟ್ಟು ಹಳ್ಳಿಗಾಡಿನ ಬೆಡಗು-ಬಿನ್ನಾಣ ಪ್ರದರ್ಶಿಸಿದ್ದು ನೋಡುವ ಕಣ್ಣಿಗೆ ನಿಬ್ಬೆರಗು ಮೂಡಿಸಿತು. ಒಟ್ಟಿನಲ್ಲಿ ನಮ್ಮ ದೇಸಿ ಉಡುಪಿನಲ್ಲಿ ಕನ್ನಡ ರಾಜ್ಯೋತ್ಸವನ್ನು ನೋಡುಗರಿಗೆ ರೊಮಾಂಚನಗೊಳಿಸಿತು.