ಆಳಂದ: ಹಳೆ ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಭೌತಿಕ ಕೊಡುಗೆಗಳು ನೀಡುವುದರಿಂದ ಮಾತ್ರ ಶಾಲೆಯ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯವಾಗುವುದು ಎಂದು ಮುಖ್ಯ ಶಿಕ್ಷಕಿಯಾದ ಮಂಜುಳಾ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಯಳಸಂಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಕುರಿತಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಶಾಲೆಗಳನ್ನು ಉತ್ಕೃಷ್ಟ ಮಟ್ಟದಲ್ಲಿ ಬೆಳೆಸಲಿಕ್ಕೆ, ಹಾಗೂ ಶೈಕ್ಷಣಿಕವಾಗಿ ಸುಂದರ ಪರಿಸರ ನಿರ್ಮಾಣಕ್ಕೆ ಹಳೆ ವಿದ್ಯಾರ್ಥಿಗಳ ಕೊಡುಗೆ ಬಹು ಅಮೂಲ್ಯವಾಗಿದೆ, ಈ ನಿಟ್ಟಿನಲ್ಲಿ ಶಾಲೆಯ ಕಟ್ಟಡ ಸೇರಿದಂತೆ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಬದಲಾವಣೆಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಬೇಕೆಂದು ಮಂಜುಳಾ ಪಾಟೀಲ್ ಅವರು ಹೇಳಿದರು.
ಶಾಲೆಯ ಕಂಪೌಂಡ್, ಕೈತೋಟ ನಿರ್ಮಾಣ ಮಾಡುವುದು ಸೇರಿದಂತೆ ಇನ್ನಿತರ ಶಾಲೆಯ ಸೌಂದರೀಕರಣಕ್ಕೆ ಹಳೆ ವಿದ್ಯಾರ್ಥಿಗಳು ಸಂಘ ರಚಿಸುವುದು ಅಗತ್ಯವಾಗಿದೆ ಎಂದು ಹೇಳಿದ ಅವರು, ಇಲ್ಲಿನ ವಿದ್ಯಾರ್ಥಿಗಳಲ್ಲಿ ಕೇವಲ ಪೊಲೀಸ್ ಹುದ್ದೆ ಏರುವುದೊಂದೆ ಗುರಿ ಇದೆ, ಬದಲಾಗಿ ಉನ್ನತ ಹುದ್ದೆಗಳನ್ನು ಪಡೆಯಲಿಕ್ಕೆ ಶಾಲೆಯಲ್ಲಿಯೇ ಗ್ರಂಥಾಲಯ ಸ್ಥಾಪಿಸುವ ಮೂಲಕ ಅವರಿಗೆ ಪ್ರೇರಣೆ ನೀಡಬೇಕಾಗಿದೆ ಎಂದರು.
ದೈ. ಶಿಕ್ಷಕರಾದ ಸಿದ್ದಾರಾಮ್ ಪಾಳೆದ್ ಮಾತನಾಡಿ, ಮುಂದಿನ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವ ಜೊತೆಗೆ ಅವರಲ್ಲಿ ಉತ್ತಮ ಕೌಶಲ್ಯಗಳನ್ನು ಬೆಳೆಸುವ ಕಾರ್ಯ ಹಳೆ ವಿದ್ಯಾರ್ಥಿ ಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಈ ವೇಳೆ ಸಹ ಶಿಕ್ಷಕರಾದ ಭಾರತಿ ಧೋತ್ರೆ ಮಾತನಾಡಿದರು.
ನಂತರ ಹಳೆ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ್ ಹಡಪದ, ಶಿವಲಿಂಗಪ್ಪ ಹೋಟಕರ್, ರಾಜಶೇಖರ್ ಧೂಪದ್ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯ ಸದಸ್ಯ ಶರಣು ಮಾಂಗ್, ಶರಣಪ್ಪ ಟಕ್ಕಳಕಿ, ಶಿಕ್ಷಕ ಜಗನ್ನಾಥ್ ಬಿರಾದಾರ್, ಶಿವಪುತ್ರ ಯಲ್ದೆ, ಮೋತಿರಾಮ್ ಚವ್ಹಾಣ್, ಸಚಿನ್ ಮಠಪತಿ, ಶಿವಕುಮಾರ ಕಾಂತಾ, ಸಿದ್ದಲಿಂಗ ಭಾಸಗಿ, ರವಿ ಹೊನಗುಂಟಿ, ಲಕ್ಷ್ಮೀಪುತ್ರ ತಳವಾರ, ಹನಮಂತ ಕುಕನೂರ್, ಸಿದ್ದು ಕುಂಬಾರ್ , ಡಿ. ಆರ್. ನದಾಫ್ ಸೇರಿದಂತೆ ಹಲವರು ಇದ್ದರು. ಸಭೆಯಲ್ಲಿ ಸಾಗರ್ ಯಲ್ದೆ ನಿರೂಪಿಸಿ, ವಂದಿಸಿದರು.