ಭಾಲಿ: ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿ ಪೌಷ್ಠಿಕತೆಯ ಕೊರತೆ ಇರುವುದನ್ನು ಗುರುತಿಸಿ ಕರ್ನಾಟಕ ಸರಕಾರ ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸಲಿಕ್ಕೆ ಚಿಂತನೆ ಮಾಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಆ ದಿಶೆಯಲ್ಲಿ ಸರಕಾರವು ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸುವ ವ್ಯವಸ್ಥೆ ಮಾಡಿಕೊಂಡಿದೆ. ಮೊಟ್ಟೆಯಲ್ಲಿ ಇರುವ ಪೌಷ್ಠಿಕಾಂಶ ಮೊಳಕೆಕಾಳು ಹಾಗೂ ಇತರೆ ದ್ವಿದಳ ಧಾನ್ಯಗಳಲ್ಲಿಯೂ ಇದೆ. ಎಲ್ಲಾ ಮಕ್ಕಳು ಮೊಟ್ಟೆಯನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಮೊಳಕೆಕಾಳು, ಹಣ್ಣು, ಹಾಲು ಇತ್ಯಾದಿಗಳನ್ನು ತಿನ್ನಲು ಎಲ್ಲಾ ಮಕ್ಕಳು ಇಷ್ಟಪಡುತ್ತಾರೆ.
ಮಕ್ಕಳ ಮನಸ್ಸು ಮುಗ್ಧವಾಗಿರುತ್ತದೆ. ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂಬ ಸಾಮಾನ್ಯ ತಿಳುವಳಿಕೆ ಅವರಲ್ಲಿ ಇರುವುದಿಲ್ಲ. ಇಂತಹ ಮಕ್ಕಳ ಎದುರಿಗೆ ಬೇರೆ ಮಕ್ಕಳು ಸಾಮೂಹಿಕವಾಗಿ ಮೊಟ್ಟೆ ಸೇವಿಸುವಾಗ ಮೊಟ್ಟೆ ಸೇವಿಸದ ಮಕ್ಕಳಿಗೆ ಹೇಸಿಗೆ ಆಗಬಹುದು. ಸಾರ್ವಜನಿಕ ಶಾಲೆಗಳಲ್ಲಿ ನಾವು ಮಕ್ಕಳ ಆಹಾರದಲ್ಲಿ ಭೇದ-ಭಾವ ಉಂಟು ಮಾಡುವುದು ಅಷ್ಟೊಂದು ಸಮಂಜಸವಲ್ಲ. ಮೊಟ್ಟೆ ಬದಲಾಗಿ ವಿವಿಧ ಸಸ್ಯಾಹಾರಿ ಪದಾರ್ಥಗಳಿವೆ ಹಣ್ಣು, ಮೊಳಕೆಕಾಳು, ಬೆಳೆಕಾಳು ಇಂತಹ ಅನೇಕ ಪದಾರ್ಥಗಳಲ್ಲಿ ವಿಫುಲವಾದ ಪೌಷ್ಠಿಕಾಂಶ ಇದೆ. ಇಂತಹ ಆಹಾರ ಎಲ್ಲ ಮಕ್ಕಳಿಗೂ ವಿತರಿಸಿದರೆ ಮಕ್ಕಳು ಶಾರೀರಿಕ, ಭೌದ್ಧಿಕ ಹಾಗೂ ಮಾನಸಿಕವಾಗಿ ಸದೃಢವಾಗುತ್ತಾರೆ.
ಹಿಂದಿನ ಸರಕಾರ ಇದೇ ರೀತಿ ಮೊಟ್ಟೆ ವಿತರಣೆ ಮಾಡುವ ನಿರ್ಧಾರ ಕೈಕೊಂಡಾಗ ರಾಜ್ಯದ ತುಂಬಾ ವ್ಯಾಪಕವಾಗಿ ವಿರೋಧ ವ್ಯಕ್ತವಾದಾಗ ಆಗಿನ ಸರಕಾರ ಈ ನಿರ್ಧಾರವನ್ನು ಹಿಂಪಡೆಯಿತು. ಈಗ ಆಡಳಿತದಲ್ಲಿರುವ ಸರಕಾರ ಅದನ್ನು ಮತ್ತೆ ಜಾರಿಗೆ ತಂದಿರುವುದು ಸರಿಯಾದ ಕ್ರಮವಲ್ಲ. ಈ ನಿರ್ಧಾರವನ್ನು ಸರಕಾರ ಹಿಂಪಡೆಯಲು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಗ್ರಹಿಸಿದ್ದಾರೆ.