ಶಹಾಬಾದ: ರಾಜ್ಯ ಸರ್ಕಾರ ೧ ರಿಂದ ೮ ನೇ ತರಗತಿ ವರೆಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ, ಮುಂದುವರೆಸಬೇಕೆಂದು ಆಗ್ರಹಿಸಿ ಮಂಗಳವಾರ ಸಾಮೂಹಿಕ ಸಂಘಟನೆಯ ಜಂಟಿ ಹೋರಾಟ ಸಿಐಟಿಯು ಅಂಗನವಾಡಿ,ಕರ್ನಾಟಕ ಪ್ರಾಂತ ರೈತ ಸಂಘ, ಎಸ್‌ಎಫ್‌ಐ ಕಟ್ಟಡ ಕಾರ್ಮಿಕರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಗ್ರಾಪಂ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ೧ ರಿಂದ ೮ ನೇ ತರಗತಿವರೆಗೆ ಮಕ್ಕಳ ಅಪೌಷ್ಟಿಕ ಸಮಸ್ಯೆ ಮತ್ತು ರಕ್ತಹೀನತೆ ಸಮಸ್ಯೆ ನಿವಾರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ಬಿಸಿಯೂಟದೊಂದಿಗೆ ಮೂರು ದಿನಗಳ ಕಾಲ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆಗೆ ನಿರ್ಧರಿಸಲಾಗಿದೆ. ಆದರೆ, ಕೆಲ ಸಂಘಟನೆಗಳು ಮೊಟ್ಟೆ ವಿತರಣೆ ಯೋಜನೆ ಕೈಬಿಡುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ. ವೈಜ್ಞಾನಿಕ ದೃಷ್ಠಿಕೋನ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಹಾಲು, ಮೊಟ್ಟೆ, ಬಾಳೆ ಹಣ್ಣು ಉತ್ತಮ ಆಹಾರ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆ, ಕಡಿಮೆ ತೂಕ ರೋಗ ಮಕ್ಕಳನ್ನು ಬಾಧಿಸುತ್ತಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಅಪೌಷ್ಟಿಕ ಸಮಸ್ಯೆ ಅತ್ಯಂತ ಗಂಭೀರ ಸ್ವರೂಪದಲ್ಲಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ಮೂಲಕ ಅವರಲ್ಲಿ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕೆಲ ಸ್ವಾಮಿಜೀಗಳು ಇದನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮೊಟ್ಟೆ ತಿನ್ನುವುದು ಮಕ್ಕಳ ಆಯ್ಕೆಯಾಗಿದೆ.
ಆದರೆ, ಸ್ವಾಮೀಜಿಗಳು ಈ ಹಕ್ಕಿನ ಮೇಲೆ ದಾಳಿ ಮಾಡುತ್ತಿರುವುದು ಅತ್ಯಂತ ಖಂಡನೀಯ ಸಂಗತಿಯಾಗಿದೆ. ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆಯಿಂದ ಮಕ್ಕಳ ಹಾಜರಾತಿಯಲ್ಲಿ ಹೆಚ್ಚಳವಾಗಿದೆ. ೧೪ ಲಕ್ಷ ಮಕ್ಕಳ ಅಪೌಷ್ಟಿಕ ನಿವಾರಣೆಗೆ ಮೊಟ್ಟೆ ಸಹಾಯಕವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ೧ ರಿಂದ ೮ ನೇ ತರಗತಿ ವರೆಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದೆಂದು ಆಗ್ರಹಿಸಿ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಚಿತ್ತಾಪೂರ ತಾಲೂಕಾಧ್ಯಕ್ಷ ಸಾಯಬಣ್ಣ ಗುಡುಬಾ, ಸಿಐಟಿಯು ಅಧ್ಯಕ್ಷೆ ಶೇಖಮ್ಮ ಕುರಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಮು ಜಾಧವ,ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಅಕ್ಷರ ದಾಸೋಹ ನೌಕರರ ಸಂಘದ ಸುನೀತಾ ರಾಠೋಡ ಸೇರಿದಂತೆ ಶಾಲಾ ಮಕ್ಕಳು ಇದ್ದರು.