ವಾಡಿ: ಮನುಷ್ಯ ದೇಹ ರೋಗಗಳಿಂದ ನರಳಲು ದುಶ್ಚಟಗಳೇ ಪ್ರಮುಖ ಕಾರಣವಾಗಿವೆ. ಪ್ರಾಣ ಕಂಟಕ ಕಾಯಿಲೆಗಳಿಂದ ಸುರಕ್ಷಿತವಾಗಿರಲು ದುರಭ್ಯಾಸಗಳನ್ನು ದೂರವಿಡುವ ಮೂಲಕ ಉತ್ತಮ ಜೀವನಶೈಲಿ ರೂಢಿಸಿಕೊಳ್ಳಿ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಅನಿತಾ ಮಲಗೊಂಡ ಹೇಳಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾ ಘಟಕ ಹಾಗೂ ಜಿಲ್ಲಾ ಎನ್‌ಸಿಡಿ ಕೋಶದ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡಾದಲ್ಲಿ ಏರ್ಪಡಿಸಲಾಗಿದ್ದ ಕ್ಯಾನ್ಸರ್ ತಪಾಸಣಾ ಸಪ್ತಾಹ ಹಾಗೂ ರೋಗ ಜಾಗೃತಿ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.
ಸಂತೋಷದಿಂದ ಕೂಡಿದ ಕುಟುಂಬ ಸದಸ್ಯರ ಬದುಕಿನಲ್ಲಿ ಆತಂಕದ ಬಿರುಗಾಳಿ ಎಬ್ಬಿಸುವ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ವಿರುದ್ಧ ಎಲ್ಲರೂ ಹೋರಾಡಬೇಕಾದ ಪ್ರಸಂಗ ಬಂದಿದೆ. ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರನ್ನು ಕಾಣಬೇಕು. ಯಾವೂದೇ ರೋಗವಿರಲಿ ಅದು ಆರಂಭಿಕವಾಗಿದ್ದರೆ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದರು.
ಕ್ಯಾನ್ಸರ್ ಕಾಯಿಲೆ ತಪಾಸಣೆ ಸೇರಿದಂತೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಇತರ ರೋಗಗಳನ್ನು ಪತ್ತೆ ಹಚ್ಚಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಫೆ.೪ ರಿಂದ ಫೆ.೧೦ರ ವರೆಗೆ ಜಾಗೃತಿ ಅಭಿಯಾನ ಮತ್ತು ರೋಗ ತಪಾಸಣೆ ನಡೆಸಲಾಗುತ್ತಿದೆ. ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ನಮ್ಮ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಲಿದ್ದಾರೆ. ದೇಹ ಆರೋಗ್ಯವಾಗಿದ್ದರೆ ಬದುಕಿನಲ್ಲಿ ಸಂತೋಷದ ಹೊನಲು ಹರಿಯುತ್ತದೆ. ಮನೆಯ ಸುತ್ತಲೂ ಉತ್ತಮ ಪರಿಸರ ನಿರ್ಮಿಸಿಕೊಂಡು ಪೋಷಕಾಂಶಯುಳ್ಳ ಆಹಾರವನ್ನೇ ಸೇವಿಸಿ ದೈಹಿಕ ಸದೃಢತೆ ಹೊಂದಬೇಕು ಎಂದು ಕರೆ ನೀಡಿದರು.
ಎನ್‌ಸಿಡಿ ಕೌಂಸಿಲರ್ ಮಂಜುಳಾ ಗುಡುಬಾ, ಭಾಗ್ಯಶ್ರೀ ಇಂಗಳಗಿ, ಆಶಾ, ರೇಣುಕಾ ಸೇರಿದಂತೆ ತಾಂಡಾದ ಮಹಿಳೆಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಕ್ಯಾನ್ಸರ್ ಮತ್ತು ಅಸಾಂಕ್ರಾಮಿಕ ರೋಗಗಳ ಗುರಿತು ಜಾಗೃತಿ ಮೂಡಿಸುವ ಪೋಸ್ಟರ್ ಪ್ರದರ್ಶಿಸಿ ನಗರದ ಜನರ ಗಮನ ಸೆಳೆದರು.