-
175 ದಿನದಿಂದ ಸತ್ಯಾಗ್ರಹ ನಿರತ ವಾಲ್ಮೀಕಿ ಗುರು ಪೀಠದ ಶ್ರೀಗಳನ್ನು ಭೇಟಿಯಾದ ಹೆಚ್.ಡಿ.ಕುಮಾರಸ್ವಾಮಿ
-
ದಯವಿಟ್ಟು ಸತ್ಯಾಗ್ರಹ ನಿಲ್ಲಿಸಿ ಎಂದು ಮನವಿ ಮಾಡಿದ ಮಾಜಿ ಸಿಎಂ
ಬೆಂಗಳೂರು: ಪರಿಶಿಷ್ಟ ವರ್ಗದ ಮೀಸಲು ಸೌಲಭ್ಯ ಹೆಚ್ಚಿಸಲು ಒತ್ತಾಯಿಸಿ ಕಳೆದ 175 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಭೇಟಿ ಮಾಡಿ ಚರ್ಚೆ ನಡೆಸಿ ಧರಣಿ ಕೈಬಿಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು,
ಸ್ವಾಮೀಜಿಗಳು 175 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಆಗಲಿ ಅಥವಾ ಮಂತ್ರಿಗಳು ಆಗಲಿ ಇಲ್ಲವೇ? ಯಾವುದೇ ಸಚಿವರು ಸ್ವಾಮೀಜಿ ಅವರನ್ನು ಭೇಟಿಯಾಗಿಲ್ಲ. ಇದು ಸ್ವಾಮೀಜಿಯೊಬ್ಬರನ್ನು ನಡೆಸಿಕೊಳ್ಳುವ ರೀತಿ ಇದೇನಾ? ಎಂದು ಅವರು ಕಿಡಿಕಾರಿದರು.
ಹಿಂದೆ ಇದೇ ಬಿಜೆಪಿಯ ಕೆಲ ನಾಯಕರು ನನ್ನ ಸರ್ಕಾರದ ವಿರುದ್ದ ವಾಲ್ಮೀಕಿ ಮಠದ ಶ್ರೀಗಳನ್ನ ಎತ್ತಿ ಕಟ್ಟಿದ್ದರು. ಇವತ್ತು ಬಿಜೆಪಿ ಅವರು ಸ್ವಾಮೀಜಿ ಅವರಿಗೆ ಕೊಟ್ಟ ಗೌರವ ಏನು? ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳು ಕೂಡಲೇ ಧರಣಿ ವಾಪಸ್ ಪಡೆಯಬೇಕು. ಹಠ ಮಾಡಬೇಡಿ. ನಿಮ್ಮ ಹೋರಾಟದ ಬಗ್ಗೆ ಕುಳಿತು ಮಾತನಾಡೋಣ. ನಿಮ್ಮ ಆರೋಗ್ಯ ಮುಖ್ಯ. ಕುಳಿತು ಮಾತನಾಡೋಣ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದರೆ ಮೊದಲು ನಿಮ್ಮ ಬೇಡಿಕೆ ಈಡೇರಿಸುವುದಾಗಿ ಅವರು ಭರವಸೆ ನೀಡಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಮಾತು ಕೊಟ್ಟು ಉಳಿಸಿಕೊಂಡಿಲ್ಲ. ಕೂಡಲೇ ಸಚಿವರು ಸ್ಥಳಕ್ಕೆ ಹೋಗಿ ಸ್ವಾಮೀಜಿ ಅವರ ಬೇಡಿಕೆ ಕೇಳಬೇಕು. ಕೂಡಲೇ ಶ್ರೀಗಳು ಧರಣಿ ಕೈ ಬಿಡಬೇಕು ಎಂದು ಹೆಚ್ ಡಿಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.