ಶಹಾಬಾದ: ಅಹಿಂಸಾ ಮಾರ್ಗವೇ ಭಾವೈಕ್ಯತೆ ಮತ್ತು ಭಾತೃತ್ವಕ್ಕೆ ಪ್ರೇರಣೆ.ಶತಮಾನಗಳಿಂದ ದಾಸ್ಯದಿಂದ ಬಳಲಿದ ಭಾರತಕ್ಕೆ ಮಾಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ್ಯ ಗಳಿಸಿದ ಪ್ರಪಂಚದ ಏಕೈಕ ರಾಷ್ಟ್ರ ಭಾರತ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಸೋಮವಾರ ನಗರಸಭೆಯ ಕಚೇರಿಯಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ಇದು ದೇಶದ ಅತಿ ದೊಡ್ಡ ಹಬ್ಬ.ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯ ದೇಶದ ಜನ ಸಮುದಾಯ ಅಭಿವೃದ್ಧಿ, ಭಾವೈಕ್ಯತರ ಮತ್ತು ನೆಮ್ಮದಿ ಬದುಕಿಗೆ ಸಹಕಾರಿ.ಬಡತನ,ಅನಕ್ಷರತೆ ಮತ್ತು ಅಸಮಾನತೆಯಿಂದ ಮುಕ್ತಿಯೇ ನಿಜವಾದ ಸ್ವಾತಂತ್ರ್ಯ ಎಂದ ಗಾಂಧೀಜಿಯವರ ಆಶಯದ ಬೆಳಕಿನಲ್ಲಿ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರತಶೀದ್ ಮರ್ಚಂಟ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ,ಅನೈತಿಕತೆಗಳು ತಾಂಡವವಾಡುತ್ತಿದ್ದು ಇದನ್ನು ತೊಲಗಿಸಿ ಮಾನವೀಯ ಗುಣಗಳನ್ನು ಬೆಳೆಸಬೇಕು.ಅನ್ಯಾಗಳ ವಿರುದ್ಧ ಧ್ವನಿ ಎತ್ತಿ ಸತ್ಯಕ್ಕಾಗಿ ಹೋರಾಟ ಮಾಡಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಸ್ವತಂತ್ರೋತ್ಸವವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಹೇಳಿದರು.
ಪೌರಾಯುಕ್ತ ಬಸವರಾಜ ಹೆಬ್ಬಾಳ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು, ಎಲ್ಲ ವರ್ಗದ ಜನರ ಸಹಕಾರ ಮತ್ತು ಹೋರಾಟದ ಫಲವಾಗಿ ಎಂದ ಅವರು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಹಕ್ಕಿದೆ ಎಂದು ಹೇಳಿದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಂ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ,ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್,ಪಾರ್ವತಿ ಪವಾರ, ನಾಗರಾಜ ಕರಣಿಕ್, ಮಹ್ಮದ್ ಇಮ್ರಾನ್, ಎಇಇ ಶರಣು ಪೂಜಾರಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ರಾಜೇಶ, ಶರಣು ಸೇರಿದಂತೆ ಅನೇಕರು ಇದ್ದರು.