ಕಲಬುರಗಿ: ಬಡ ವಿದ್ಯಾರ್ಥಿಗಳ ಪ್ರವೇಶ ಹಾಗೂ ಗುಣಾತ್ಮಕ ಶಿಕ್ಷಣ ನೀಡುವುದೇ ದಿ. ಪ್ರೊ. ಎಂ.ಬಿ. ಅಂಬಲಗಿ ಅವರ ಸದುದ್ದೇಶವಾಗಿತ್ತು. ಈ ದಿಸೆಯಲ್ಲಿ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಬೋಧಕ ವೃಂದದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ದಿಶಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಖಜೂರಗಿ ತಿಳಿಸಿದರು.
ಇಲ್ಲಿನ ಹೊಸ ಜೇವರ್ಗಿ ರಸ್ತೆಯ ಗುರುಪಾದೇಶ್ವರ ಪಿಯು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಲಿ. ಹೀಗಾಗಿ ಶಿಕ್ಷಣ ಸಂಸ್ಥೆ ಬಲವರ್ಧನೆಗೆ ಬೋಧಕರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಕಾರಣಿಭೂತರಾಗಿರುತ್ತಾರೆ ಎಂದರು.
ವಿದ್ಯಾರ್ಥಿ ಜೀವನ ಅತ್ಯಮುಲ್ಯವಾಗಿದ್ದು, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಗುರು, ಗುರಿವಿನೊಂದಿಗೆ ಮುನ್ನಡೆಯಬೇಕು. ಆದರೆ ಅಂಕ ಗಳಿಸುವುದೇ ಜೀವನವಲ್ಲ, ಪದವಿ, ಪ್ರಮಾಣ ಪತ್ರ ಪಡೆಯುವುದಷ್ಟೇ ಜೀವನದ ಗುರಿ ಆಗಿರಬಾರದು ಎಂದ ಅವರು, ಸಂಸ್ಕೃತಿ, ಪರಂಪರೆ ಮತ್ತು ಸಂಸ್ಕಾರ ಮೈಗೂಡಿಸಿಕೊಂಡಾಗ ಮಾತ್ರ ಆದರ್ಶ ಬದುಕು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಇತ್ತೀಚೆಗೆ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಹಿತ ಮಿತವಾಗಿ ಬಳಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯ. ಮೊಬೈಲ್ ಪೂರಕವಾಗಿದ್ದಷ್ಟೇ ಮಾರಕವೂ ಇದೆ ಎಂಬುದು ಮರೆಯಬಾರದು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಚಿತ್ತಾಪುರಿನ ಸರ್ಕಾರಿ ಪಿಯು ಕಾಲೇಜಿನ ಮಾಜಿ ಪ್ರಾಚಾರ್ಯ ಸಿದ್ದಪ್ಪ ಕುಳಗೇರಿ, ಸಿದ್ಧಾರೂಢ ಮಠದ ಪ್ರಧಾನ ಕಾರ್ಯದರ್ಶಿ ಕಲ್ಯಾಣರಾವ್ ಭುಜರ್ಕೆ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ವಾದಿರಾಜ್ ವ್ಯಾಸಮುದ್ರ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಸ್ವಾಗತಿಸಿದರು. ನಿಖಿಲ ಅತಿಥಿ ಪರಿಚಯಿಸಿದರು. ಉಪನ್ಯಾಸಕರಾದ ರೂಪಾ, ಭಾಗ್ಯಶ್ರೀ, ಡಾ. ಶರಣಬಸಮ್ಮ ಹಾಗೂ ವಿದ್ಯಾರ್ಥಿಗಳಾದ ಅಭಿಷೇಕ, ಸುಹಾಸಿನಿ ಅನಿಸಿಕೆ ವ್ಯಕ್ತಪಡಿಸಿದರು. ಸವಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ದೇವಿಂದ್ರಪ್ಪ ಆವಂಟಿ, ರಾಘವೇಂದ್ರ ಕುಲಕರ್ಣಿ, ಅನಘಾ ವ್ಯಾಸಮುದ್ರ, ಮೋಹಿನಿ, ರವಿ, ಲಕ್ಷ್ಮೀಕಾಂತ, ಪ್ರಹ್ಲಾದ್ ಜೋಶಿ ಮತ್ತಿತರರಿದ್ದರು.
ಇಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಒಳ್ಳೆಯ ವಿದ್ಯಾವಂತರನ್ನಾಗಿಸುವುದೇ ಏಕೈಕ ಗುರಿ. ಫಲಿತಾಂಶದಲ್ಲಿ ರ‍್ಯಾಂಕಿಂಗ್, ಜಿಲ್ಲಾ ಟಾಪರ್‌ಯಾದಾಗ ಮಾತ್ರ ನನಗೆ ನಿಜವಾದ ಕಾಣಿಕೆ ಕೊಟ್ಟಂತಾಗಲಿದೆ. ವಾದಿರಾಜ ವ್ಯಾಸಮುದ್ರ, ಅಧ್ಯಕ್ಷ, ಶ್ರೀಗುರುಪಾದೇಶ್ವರ ಪಿಯು ಕಾಲೇಜು