ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕೂಡಾ ತಳ ಸಮುದಾಯದ ಅಲೆಮಾರಿಗಳಿಗೆ ಸಿಕ್ಕಿರಲಿಲ್ಲ. ಆದರೆ, ಡಾ ಬಾಬಾಸಾಹೇಬ ಹಾಗೂ ನೆಹರು ಅವರ ಪ್ರಯತ್ನದಿಂದ ಬ್ರಿಟೀಷ್ ಸರ್ಕಾರದ ಟ್ರೈಬ್ಸ್ ಆ್ಯಕ್ಟ್ ರದ್ದುಗೊಳಿಸಿದಾಗ ಮಾತ್ರ ಸ್ವಾತಂತ್ಯ ಸಿಕ್ಕಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.
1871 ರಲ್ಲಿ ಅಂದಿನ ಬ್ರಿಟೀಷ್ ಸರ್ಕಾರ ಜಾರಿಗೊಳಿಸಿದ್ದ ಕ್ರಿಮಿನಲ್ ಟ್ರೈಬ್ಸ್ ಆ್ಯಕ್ಟ್ ( ಅಪರಾದಿ ಜನಾಂಗ ಅಧಿನಿಯಮ)ವನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರಯತ್ನದ ಫಲವಾಗಿ ಸದರಿ ಅಧಿನಿಯಮ ಆಗಷ್ಟ್ 31, 1952 ರಂದು ರದ್ದುಗೊಳಿಸಲಾಯಿತು ಈ ಹಿನ್ನೆಲೆಯಲ್ಲಿ ನಗರದ ಎಸ್ ಎಂ ಪಂಡಿತ ರಂಗಮಂದಿರ ದಲ್ಲಿ ಹಿಂದ ಬಂಜಾರಾ ಗೌರವ ಗಾಥಾ ಸಮಿತಿ ಕಲಬುರಗಿ ವತಿಯಿಂದ ಏರ್ಪಡಿಸಲಾಗಿದ್ದ ” ವಿಮುಕ್ತಿ ದಿವಸ್ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತುಳಿತಕ್ಕೆ ಒಳಗಾದ ಅಲೆಮಾರಿ ಸಮುದಾಯಗಳನ್ನು ತುಳಿಯಲು ಬ್ರಿಟೀಷರು ಈ ಅಧಿನಿಯಮವನ್ನು ಬಳಸಿಕೊಂಡಿದ್ದರು. ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಬಹಳಷ್ಟು ಕಡೆ ಅಲೆಮಾರಿಗಳಿಗೆ ತೊಂದರೆಯಾಗುತ್ತಿದೆ. ಅಂದಿನ ಬ್ರಿಟೀಷರ ಒಡೆದು ಆಳು ನೀತಿಯನ್ನು ಇಂದಿನ ರಾಜಕಾರಣಿಗಳು ಅನಿಸರಿಸಿಕೊಂಡಿದ್ದಾರೆ. ಇದನ್ನು ಪ್ರತಿರೋಧಿಸಬೇಕೆಂದರೆ ತಳ ಸಮುದಾಯಗಳು ಒಗ್ಗಟ್ಟಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಅರಸರ ಕಾಲದಲ್ಲಿ ಅಲೆಮಾರಿಗಳಿಗೆ ಎಸ್ ಸಿ ಪಟ್ಟಿಗೆ ಸೇರಿಸಿದ ಹಿನ್ನೆಲೆಯಲ್ಲಿ ಅಂದಿನ ಸಿಎಂ ದೇವರಾಜ ಅರಸ್ ಅವರು ರಾಜ್ಯದ ಅಲೆಮಾರಿಗಳಿಗನ್ನು ಎಸ್ ಸಿ ಪಟ್ಟಿಗೆ ಸೇರಿಸಿ ಸೌಲಭ್ಯ ದೊರಕಿಸಿಕೊಟ್ಟರು ಎಂದರು ನೆನಪಿಸಿಕೊಂಡರು.
ಅಲೆಮಾರಿ ಅಥವಾ ಬುಡಕಟ್ಟು ಸಮುದಾಯಗಳ ಅಭ್ಯುದಯಕ್ಕೆ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದ ಖರ್ಗೆ, ನಿಮ್ಮೆಲ್ಲರ ಆಶೀರ್ವಾದದಿಂದ ಖರ್ಗೆ ಸಾಹೇಬರು ಗುರಮಠಕಲ್ ನಲ್ಲಿ ಒಂಭತ್ತು ಸಲ ಗೆದ್ದಿದ್ದಾರೆ ಈ ಸಮುದಾಯಗಳನ್ನು ದಮನ ಮಾಡಿದ್ದರೆ ಅಷ್ಟು ಸಲ ಗೆಲ್ಲಲು ಸಾಧ್ಯವಿತ್ತೇ? ಎಂದರು.
ನಾನು ಸಮಾಜಕಲ್ಯಾಣ ಸಚಿವನಾಗಿದ್ದಾಗ ಪ್ರತಿತಾಂಡಗಳ ಸಂತ ಸೇವಾಲಾಲ್ ಪ್ರಗತಿ ತಾಂಡಾ ನಿರ್ಮಾಣಕ್ಕೆ ಕನಿಷ್ಠ ರೂ 50 ಲಕ್ಷದಿಂದ 1.50 ಕೋಟಿಯವರೆಗೆ ಅನುದಾನ ಬಿಡುಗಡೆ ಮಾಡಿದ್ದೇನೆ, ಸೇವಾಲಾಲ ಭವನ ನಿರ್ಮಾಣ, ಲಂಬಾಣಿ ಗರ ಸಂಪ್ರದಾಯಸ್ಥ ಉಡುಪು ರಕ್ಷಣೆಗೆ ಕ್ರಮ ಕೈಗೊಂಡಿದ್ದೇನೆ. ಸೊರಗೊಂಡನಕೊಪ್ಪದ ಅಭಿವೃದ್ದಿಗೆ ರೂ 190 ಕೋಟಿ ಅನುದಾನ ನಿಗದಿಪಡಿಸಿ ರೂ 60 ಕೋಟಿ ಬಿಡುಗಡೆ ಮಾಡಿದ್ದೆ ಆ ಅನುದಾನ ಎಲ್ಲಿ ಹೋಗಿದೆ ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಅವರು ಇಷ್ಟೆಲ್ಲ ಅಭಿವೃದ್ದಿ ಮಾಡಿದರೂ ನನ್ನನ್ನು ಬಂಜಾರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ವಿಷಾದಿಸಿದರು.
ಮುಖ್ಯ ಸಚೇತಕ ಹಾಗೂ ಶಾಸಕರಾದ ಡಾ. ಅಜಯ್ ಸಿಂಗ್ ಮಾತನಾಡಿ, ಅಸ್ಪೃಶ್ಯತೆ ಈ ದೇಶದ ಐಕ್ಯತೆಗೆ ಧಕ್ಕೆ ತಂದಿದೆ. ಕೆಲ ಸಮುದಾಯಗಳು ಹುಟ್ಟಿನಿಂದಲೇ ಅಪರಾಧಿ ಎನ್ನುವ ಹೆಸರು ಬ್ರಿಟೀಷರ ಕಾಲದಿಂದಲೇ ಬಂದಿತ್ತು ಜೊತೆಗೆ ಅಸ್ಪೃಶ್ಯತೆ ಅಂಟಿಕೊಂಡಿತ್ತು. ಜೊತೆಗೆ ಟ್ರೈಬ್ ಅಧಿನಿಯಮ ಅಲೆಮಾರಿ ಸಮುದಾಯಕ್ಕೆ ಮಾರಕವಾಗಿ ಪರಿಣಮಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಅಧಿನಿಯಮವನ್ನು ರದ್ದುಗೊಳಿಸಿತ್ತು ಎಂದರು.
( ಭಾರತದಲ್ಲಿ ಬ್ರಿಟೀಷ್ ಅಧಿಪತ್ಯದ ಕಾಲದಲ್ಲಿ ಲಂಬಾಣಿ ಸೇರಿದಂತೆ 198 ಇತರೆ ಅಲೆಮಾರಿ ಸಮುದಾಯಗಳು ಸಂಚಾರ ಮಾರ್ಗ ಬಲ್ಲವರಾಗಿದ್ದು. ಆ ಸಂದರ್ಭದಲ್ಲಿ ಬ್ರಿಟೀಷರಿಗೆ ಈ ಅಲೆಮಾರಿ ಸಮುದಾಯಗಳ ಸಹಾಯ ಅವಶ್ಯಕವಾಗಿತ್ತು. ಆದರೆ ಬ್ರಿಟೀಷ್ ಬೇಡಿಕೆಯನ್ನು ಈ ಸಮುದಾಯಗಳು ನಿರಾಕರಿಸಿದ ಪರಿಣಾಮ ಕ್ರಿಮಿನಲ್ ಟ್ರೈಬ್ಸ್ ಆ್ಯಕ್ಟ್ ಜಾರಿಗೊಳಿಸಿದ ಬ್ರಿಟೀಷರು ಅಲೆಮಾರಿ ಸಮುದಾಯಗಳ ದಮನಕ್ಕೆ ಮುಂದಾದರು. ಅಧಿನಿಯಮದ ಪ್ರಕಾರ ಈ ಸಮುದಾಯದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯನ್ನು ಹುಟ್ಟಿನಿಂದಲೇ ಅಪರಾಧಿ ಎಂದು ಘೋಷಿಸಲಾಗಿತ್ತು. ಇವರು ಮುಕ್ತ ಸಂಚಾರ ಮಾಡುವುದನ್ನು ನಿಷೇಧಿಸಲಾಗಿತ್ತು.
ಪೊಲೀಸ್ ಠಾಣೆಗಳಿಗೆ ಹೋಗಿ ಹಾಜರು ಹಾಕಬೇಕಾಗಿತ್ತು. ಇದರಿಂದಾಗಿ ಈ ಅಲೆಮಾರಿ ಸಮುದಾಯಗಳು ಬೆಟ್ಟಗುಡ್ಡಗಳಲ್ಲಿ ನೆಲೆಸಿ ಅಮಾನವೀಯ ಜೀವನ ಸಾಗಿಸತೊಡಗಿದರು. ಈ ಅಧಿನಿಯಮದ ಕರಾಳತೆಯನ್ನು ಅರಿತು ನೆಹರು ಹಾಗೂ ಡಾ ಅಂಬೇಡ್ಕರ್ ಅವರು ಅಧಿನಿಯಮವನ್ನು ರದ್ದುಗೊಳಿಸಿದ್ದರು. ಆ ನಂತರ 198 ಅಲೆಮಾರಿ ಸಮುದಾಯಗಳನ್ನು ಡಿನೋಟಿಫೈಡ್ ಟ್ರೈಬ್ಸ್ ಎಂದು ವರ್ಗೀಕರಿಸಲಾಗಿದೆ.)
ವೇದಿಕೆಯ ಮೇಲೆ ಶಾಸಕರಾದ ಹಾಗೂ ಮುಖ್ಯ ಸಚೇತಕರಾದ ಡಾ ಅಜಯ್ ಸಿಂಗ್, ಕನೀಜ್ ಫಾತಿಮಾ, ಮಾಜಿ ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ರೇವು ನಾಯಕ ಬೆಳಮಗಿ, ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು,ಅಲ್ಲಮಪ್ರಭು ಪಾಟೀಲ, ಮಾಜಿ ಮೇಯರ್ ಶರಣಕುಮಾರ ಮೋದಿ, ಅರುಣ್ ಪಾಟೀಲ್, ಕನಿರಾಂ, ರವಿರಾಜ ಕೊರ್ವಿ, ಸುಭಾಷ್ ರಾಠೋಡ ಸೇರಿದಂತೆ ಹಲವರು ಇದ್ದರು.