ಕಲಬುರಗಿ: ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಂತ್ರಜ್ಞಾನ ದೊರೆಯುತ್ತಿದ್ದು ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಮಹತ್ವ ಕೊಡಬೇಕು. ಪ್ರಾಯೋಗಿಕ ಕಲಿಕೆಯಿಂದ ಮಾತ್ರ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಾಗುವುದು, ಈ ನಿಟ್ಟಿನಲ್ಲಿ ರಕ್ಷಣಾಪಡೆಯ ಕ್ಷೇತ್ರದೊಂದಿಗೆ ಒಡಂಬಡಿಕೆ ಮಾಡಿಕೊಡಲು ಅನುಕೂಲ ಮಾಡಿಕೊಡಲಾಗುವುದು ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣಾಪಡೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಾಜೆಕ್ಟಗಳನ್ನು ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಭಾರತಿಯ ರಕ್ಷಣಾಪಡೆಯ ಲೆಫ್ಟಿನೆಂಟ್ ಜನರಲ್ ಬೆಗ್ಗಾವಲಿ ಸೋಮಶೇಖರ ರಾಜು, ರಕ್ಷಣಾ ಸಿಬ್ಬಂಧಿ ಉಪ-ನಾಯಕ ಅವರು ತಿಳಿಸಿದರು.
ಅವರು ಪಿ.ಡಿ.ಎ. ಕಾಲೇಜಿಗೆ ಔಪಚಾರಿಕ ಭೇಟಿಯನ್ನು ನೀಡಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿಯವರನ್ನು ಭೇಟಿಯಾಗಿ ಮಾತನಾಡಿದರು.
ಕಾಲೇಜನ್ನು ವೀಕ್ಷಿಸಿದ ಅವರು ಸಂಸ್ಥೆ ಹಾಗೂ ಪಿ.ಡಿ.ಎ. ಕಾಲೇಜಿನ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಿಜಾಪೂರದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿಯಾದ ಅವರು ೧೯೮೪ರಲ್ಲಿ ಭಾರತಿಯ ರಕ್ಷಣಾಪಡೆಯಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ತಮ್ಮ ೩೮ ವರ್ಷಗಳ ಸೇವಾವಧಿಯಲ್ಲಿ ’ಆಪರೇಶನ್ ಪರಾಕ್ರಮ’ ಹಾಗೂ ’ಉರಿ’ ಸೇರಿದಂತೆ ಅನೇಕ ಕಾರ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿಯವರು ಪಿ.ಡಿ.ಎ, ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರಕ್ಷಣಾ ಪಡೆಯ ವತಿಯಿಂದ ವಿಶೇಶ ರೀತಿಯ ತಾಂತ್ರಿಕ ಸೌಲಭ್ಯ ದೊರಕಿಸಿಕೊಡಲು ವಿನಂತಿಸಿಕೊಂಡರು. ಅವರ ಧರ್ಮಪತ್ನಿ ಶ್ರೀಮತಿ ಶಕುಂತಲಾ ರಾಜು ಅವರು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಇನಸ್ಟ್ರುಮೆಂಟೇಶನ್ ವಿಭಾಗದ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿದ್ದು, ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಇಲ್ಲಿ ಸ್ಮರಿಸಬಹುದು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಸಂಸದ ಡಾ. ಉಮೇಶ ಜಾಧವ, ಜಿಲ್ಲಾಧಿಕಾರಿ ಯಶವಂತ ವ್ಹಿ, ಗುರುಕರ ಹಾಗೂ ಮಹಾವಿದ್ಯಾಲಯದ ಉಪ ಪ್ರಾಚಾರ್ಯರುಗಳು, ಪರೀಕ್ಷಾ ನಿಯಂತ್ರಣಾಧಿಕಾರಿಗಳು, ಡೀನರು, ವಿಭಾಗದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.