ಆನೇಕಲ್: ಇಲ್ಲಿನ ಅತ್ತಿಬೆಲೆಯ ಗಡಿ ಗೋಪುರವನ್ನು ದುರಸ್ತಿ ಮಾಡದೆ ಹಾಗೆಯೇ ಬಿಟ್ಟಿರುವುದು ಸರಿಯಲ್ಲಿ. ಸಂಬಂಧಪಟ್ಟ ಅಧಿಕಾರಿಗಳು ಗಡಿ ಗೋಪುರವನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಗಜೇಂದ್ರ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಲಾರಿಯೊಂದು ಗಡಿಗೋಪುರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಡಿಗೋಪುರದ ಒಂದು ಭಾಗ ಬಿರುಕುಬಿಟ್ಟು ನಾಶಗೊಂಡಿದೆ. ಆ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕೂಡಲೇ ದುರಸ್ತಿ ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೆವು ಎಂದು ಅವರು ಹೇಳಿದ್ದಾರೆ.
ಅತ್ತಿಬೆಲೆಯ ಗಡಿಗೋಪುರಕ್ಕೆ ತನ್ನದೇ ಆದ ಇತಿಹಾಸವಿದೆ. ಹಾಗೂ ಈ ಭಾಗದ ಕನ್ನಡಿಗರ ಅಭಿಮಾನದ ಸಂಕೇತವು ಆಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ನಿರ್ಲಕ್ಷ್ಯ ಮಾಡುತ್ತಾ ಬರುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ದೊಡ್ಡಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.