ಸುರಪುರ: ಟಂ ಟಂ ಆಟೋ ಹಾಗೂ ಟ್ರ್ಯಾಕ್ಟರ್ ಮದ್ಯೆ ಅಪಘಾತ ಸಂಭವಿಸಿ ಇಬ್ಬರು ರಾಷ್ಟ್ರ ಮಟ್ಟದಲ್ಲಿ ಆಡಬೇಕಿದ್ದ ಖೋ ಖೋ ಕ್ರೀಡಾಪಟುಗಳು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ತಾಲೂಕಿನ ದೇವರಗೋನಾಲ ಗ್ರಾಮದ ಖೋ ಖೋ ಕ್ರೀಪಾಪಟು ವೆಂಕಟೇಶ ಬಂಟನೂರ ಹಾಗೂ ಈತನ ಸ್ನೇಹಿತ ಖೋ ಖೋ ಆಟಗಾರ ಶಿರಸಿಯ ನಾರಾಯಣ ಮರಾಠ ಇಬ್ಬರು ಗುರುವಾರ ರಾತ್ರಿ ಟಂ ಟಂ ಆಟೋದಲ್ಲಿ ಸುರಪುರ ದಿಂದ ದೇವರಗೋನಾಲ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿದ್ದಾಪುರ ಬಳಿಯಲ್ಲಿ ಎದುರಾಗಿ ಬಂದ ಮಹಾರಾಷ್ಟ್ರ ಮೂಲದ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿಯಾಗಿದ್ದರಿಂದ ಆಟೋ ಸಂಪೂರ್ಣ ನುಜ್ಜಾಗಿದ್ದರಿಂದ ಪ್ರಯಾಣಿಸುತ್ತಿದ್ದ ಇಬ್ಬರು ಕ್ರೀಡಾಪಟುಗಳು ಸಾವನ್ನಪ್ಪಿದ್ದಾರೆ.ಅಲ್ಲದೆ ಆಟೋದಲ್ಲಿದ್ದು ಇನ್ನು ಇಬ್ಬರು ಯುವಕರಿಗೆ ಗಾಯಗಳಾಗಿವೆ.ಸಾವನ್ನಪ್ಪಿರುವ ಇಬ್ಬರು ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರ್ನಾಟಕ ತಂಡವನ್ನು ಪ್ರತಿನಿಧಿಸುವ ತಯಾರಿಗಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದರು ಎಂದು ಮುಖಂಡ ವೆಂಕಟೇಶ ಬೇಟೆಗಾರ ತಿಳಿಸಿದರು.
ಅಲ್ಲದೆ ಯುವಕರ ಸಾವಿಗೆ ದೇವರದೋನಾಲ ಸೇರಿದಂತೆ ತಾಲೂಕಿನ ಅನೇಕ ಜನ ಕ್ರೀಡಾ ಪ್ರೇಮಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಸುರಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಮಂಜುನಾಥ ಟಿ,ಪಿ.ಐ ಆನಂದ ವಾಘಮೊಡೆ ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.