ಕಲಬುರಗಿ: ಕಲಬುರಗಿ ತಾಲೂಕಿನ ಮಿಣಜಗಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಸರ್ಕಾರಿ ಗೋಶಾಲೆಗೆ ಶುಕ್ರವಾರ ಭೇಟಿ ನೀಡಿ ಪರಶೀಲಿಸಿದ ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್ ಅವರು ಗೋಶಾಲೆ ಕಾಮಗಾರಿ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆಗೆ ಕಲಬುರಗಿ ಅಗಮಿಸಿದ ಅವರು, ಸಭೆ ನಡೆಸಿದ ನಂತರ ಜಿಲ್ಲಾ ಗೋಶಾಲೆ ನಿರ್ಮಾಣ ಸ್ಥಳ ಪರಿಶೀಲಿಸಿದರು.
ಜಿಲ್ಲಾ ಗೋಶಾಲೆಗೆ 25 ಎಕರೆ ಜಮೀನು ನೀಡಿರುವುದರಿಂದ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲಿಯೇ ಗೋವುಗಳಿಗೆ ಮೇವು ಬೆಳೆಸಬಹುದಾಗಿದೆ. ಜಮೀನಿನ ಸುತ್ತ ನರೇಗಾ ಯೋಜನೆಯಡಿ ತಂತಿ ಬೇಲಿ (ಫೆನ್ಸಿಂಗ್) ಅಳವಡಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ.ಬದೋಲೆ ಅವರಿಗೆ ತಿಳಿಸಿದರು.
ಇದಲ್ಲದೆ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಸರ್ಕಾರದಿಂದ ತಾಲೂಕು ಗೋಶಾಲೆ ತೆರೆಯಲಾಗುತ್ತಿದೆ ಎಂದು ಕಾರ್ಯದರ್ಶಿಗಳು ಪ್ರಶ್ನಿಸಿದರು. ಅಫಜಲಪೂರ, ಚಿಂಚೋಳಿ, ಸೇಡಂ ತಾಲೂಕಿನಲ್ಲಿ 10 ಎಕರೆ ಜಮೀನು ಗುರುತಿಸಲಾಗಿದೆ. ಜೇವರ್ಗಿಯಲ್ಲಿ ಜಮೀನು ಗುರುತಿಸಬೇಕಿದೆ ಎಂದು ಪಶುಸಂಗೋಪನೆ ಉಪನಿರ್ದೇಶಕ ಡಾ.ಎಸ್.ಡಿ.ಅವಂಟಿ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಕಲಬುರಗಿ ತಹಶೀಲ್ದಾರ ಪ್ರಕಾಶ ಕುದರಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಕೆ.ಟಕ್ಕಳಕಿ ಸೇರಿದಂತೆ ಇನ್ನಿತರರು ಇದ್ದರು.