- ನೆಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ ಪರಿಹಾರ ನೀಡಲು ಜೆಡಿಎಸ್ ಮನವಿ
ಕಲಬುರಗಿ: 2ಎ ಇರುವುದನ್ನು ಸರ್ಕಾರ 2ಡಿ ಎಂದು ಘೋಷಣೆ ಮಾಡಿ ರಂಗ ಎನ್ನೋ ಹೆಸರು ಮಂಗ ಮಾಡಿದ್ದಾರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಲೇವಡಿ ಮಾಡಿದರು.
ಪಂಚರತ್ನ ರಥಯಾತ್ರೆ ನಿಮಿತ್ತ ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಅವರು, ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಮೂಗಿಗೆ ತುಪ್ಪ ಸವರಿಲ್ಲ. ಹಣೆ ಮೇಲೆ ಸುರಿದು ವಾಸನೆ ಸಹ ಬಾರದಂತೆ ಮಾಡಿದ್ದಾರೆ ಹೈಕೋರ್ಟ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ಯಾರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯನವರಿಗೆ ಈ ಕ್ಷೇತ್ರ ಸೇಫ್ ಅಂತೂ ಅಲ್ಲ. ಕೋಲಾರದಲ್ಲಿ ಸಿದ್ರಾಮಯ್ಯ ಅವರನ್ನು ದೇವರೇ ಕಾಪಾಡಬೇಕು. ಅವರ ಪಕ್ಷದವರೇ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಂದರೆ ನಮಗ್ಯಾಕೆ ಭಯ? ಹಾಗೆ ನೋಡಿದರೆ ಇಷ್ಟು ವರ್ಷ ಈ ರೀತಿ ಬೇಜವಾಬ್ದಾರಿಯಾಗಿ ಆಡಳಿತ ನಡೆಸಿರುವುದಕ್ಕೆ ಜನ ನೀವು ಬಯ ಬೀಳಬೇಕು. ಹುಬ್ಬಳ್ಳಿಗೆ ಬಂದು ಅವರೇನಾದರೂ ಕೊಡುಗೆ ನೀಡಿದ್ರಾ? ಏನೂ ಇಲ್ಲ. ಹೀಗಾಗಿ ಕಲಬುರಗಿಗೆ ಬಂದಾಗಲೂ ಅವರಿಂದ ಏನೂ ನಿರೀಕ್ಷಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಂತರ ಕಲಬುರಗಿ ನಗರದಲ್ಲಿ ರೋಡ್ ಶೋ ನಡೆಸಿ ಜಿಲ್ಲಾಧಿಕಾರಿ ಮೂಲಕ ನೆಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ ಪರಿಹಾರ ನೀಡುವಂತೆ ಸಿಎಂಗೆ ಜೆಡಿಎಸ್ ಪಕ್ಷದ ಪರವಾಗಿ ಮನವಿ ಸಲ್ಲಿಸಿದರು. ಬಂಡೆಪ್ಪ ಖಾಸೆಂಪುರ, ನಾಸಿರ್ ಹುಸೇನ್ ಉಸ್ತಾದ, ಕೃಷ್ಣಾರೆಡ್ಡಿ. ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ ಇತರರಿದ್ದರು.