ಸೇಡಂ: ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಸಿಲಿಂಡರ್ ಗ್ಯಾಸ್ ಸೌಲಭ್ಯ ಒದಗಿಸಿದ ಕೇಂದ್ರ ಬಿಜೆಪಿ ಸರ್ಕಾರ, ಈಗ ನಿರಂತರವಾಗಿ ಬೆಲೆ ಏರಿಕೆಯ ಭಾರ ಹೊರೆಸುವ ಮೂಲಕ ಬಡವರಿಗೆ ಮೋಸ ಮಾಡಿದೆ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಆರೋಪಿಸಿದ್ದಾರೆ.
ಗೃಹಬಳಕೆ ಅನಿಲ ಸಿಲಿಂಡರ್ ಬೆಲೆ ರೂ.50 ಹೆಚ್ಚಿಸಿದ ಕೇಂದ್ರ ಸರ್ಕಾರದ ಹೇರಿಕೆ ಕ್ರಮವನ್ನು ಖಂಡಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಮಾತನಾಡಿ ಕಳೆದ ಹನ್ನೆರಡು ತಿಂಗಳಲ್ಲಿ ಆರನೇ ಬಾರಿಗೆ ಅಡುಗೆ ಅನಿಲ ದರ ಏರಿಕೆಯಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಬಜೆಟಿನಲ್ಲಿ ಅಡುಗೆ ಅನಿಲದ ಸಬ್ಸಿಡಿಯನ್ನು ಶೇ.75 ರಷ್ಟು ಕಡಿತ ಮಾಡಿದ್ದರಿಂದ ಜನಸಾಮಾನ್ಯರ ಮೇಲೆ ನಿರೀಕ್ಷಿತ ದರ ಏರಿಕೆಯ ಹೊರೆ ಬಿದ್ದಿದೆ.
ಆದರೆ ಜಾಗತಿಕವಾಗಿ ಕಚ್ಚಾತೈಲದ ದರ ಇಳಿಕೆಯಾಗಿದೆ. ಅಲ್ಲದೆ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಆಮದು ಮಾಡುವ ಪ್ರಮಾಣವು ಹೆಚ್ಚಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ ಎಂದಿದ್ದಾರೆ.
ಉಜ್ವಲ ಯೋಜನೆಯಡಿ ಬಡವರಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಬಡವರ ಕಣ್ಣೀರಿಗೆ ಕಾರಣವಾಗಿದ್ದಾರೆ. ಈ ಉಜ್ವಲ ಫಲಾನುಭವಿಗಳೂ ಕೂಡ ಮಾರುಕಟ್ಟೆಯಲ್ಲಿ ಇದೇ ದರ ನೀಡಿ ಖರೀದಿಸಬೇಕಾದ ಅನಿವಾರ್ಯ ಪ್ರಸಂಗ ಸೃಷ್ಠಿಸಿ ಬಡ ಜನರಿಗೆ ದೋಖಾ ಮಾಡಿದ್ದಾರೆ.
ಜನಸಾಮಾನ್ಯರು ಬಳಸುವ ಈ ಅಡುಗೆ ಅನಿಲ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರದ ಕ್ರಮ ಜನವಿರೋಧಿಯಾಗಿದೆ ಎಂದರು