ಚಿತ್ತಾಪುರ: ಸಿಎಂ ಪರಿಹಾರ ನಿಧಿಗೆ ರೂ ಎರಡು ಲಕ್ಷ ದೇಣಿಗೆ ಘೋಷಣೆ ಮಾಡಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಪ್ರವಾಹ ಸಂತ್ರಸ್ತರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಚಿತ್ತಾಪುರಕ್ಕೆ ತಾರತಮ್ಯ ಮಾಡಲಾಗಿದ್ದು ಸರಿಪಡಿಸುವಂತೆ ಸಿಎಂ ಗೆ ಆಗ್ರಹಿಸಿ, ನೆರೆ ಸಂತ್ರಸ್ತರಿಗೆ ಅನುದಾನ ಬಿಡುಗಡೆ ಮಾಡಲು ನೋಟು ಪ್ರಿಂಟ್ ಮಾಡುವ ಮಷಿನಿಲ್ಲ ಎನ್ನುವ ಸಿಎಂ ಯಡಿಯೂರಪ್ಪ ಅವರ ಹೇಳಿಕೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಖಂಡಿಸಿದರು.
ಇಂದು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ನಡೆದ ಮಾದ್ಯಮಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ತೀವ್ರ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ನಾಲ್ಕು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಮೂರು ಲಕ್ಷ ಜನರನ್ನು ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ. ಹಲವಾರು ಸಾವು ನೋವುಗಳು ಉಂಟಾಗಿವೆ. ಸುಮಾರು ನಲವತ್ತು ಸಾವಿರ ಕೋಟಿ ಹಾನಿ ಅಂದಾಜಿಸಲಾಗಿದೆ. ಆದರೆ, ಶೀಘ್ರ ಪರಿಹಾರ ನೀಡುವ ಬದಲು ಸಿಎಂ ನೋಟು ಪ್ರಿಂಟ್ ಮಾಡುವ ಮಷೀನು ಇಟ್ಟಿಲ್ಲ ಎಂದಿರುವುದು ಜನರಿಗೆ ಮಾಡಿದ ಅನ್ಯಾಯ ಎಂದು ಟೀಕಿಸಿದರು. ರಾಜ್ಯ ಇಷ್ಟೊಂದು ತೀವ್ರ ಸಂಕಟದಲ್ಲಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಬಂದು ಹೋಗಿದ್ದಾರೆಯೇ ಹೊರತು ಅನುದಾನ ಬಿಡುಗಡೆ ಮಾಡುವ ಕುರಿತು ಮಾತೇ ಆಡಲಿಲ್ಲ. ಕನಿಷ್ಠ ಹತ್ತು ಸಾವಿರ ಕೋಟಿ ಅನುದಾನವನ್ನಾದರೂ ಘೋಷಿಸಬೇಕಿತ್ತು ಆದರೆ ಸಚಿವರು ಬಂದು ಹೋಗಿದ್ದಷ್ಟೇ ಆಯಿತು. ಇದರಿಂದಾಗಿ ರಾಜ್ಯ ಒಂದು ರೀತಿಯಲ್ಲಿ ಟೂರಿಂಗ್ ಸ್ಪಾಟ್ ಆದಂತಾಗಿದೆ ಎಂದು ವ್ಯಂಗ್ಯವಾಡಿದರು.
ಆಪರೇಷನ್ ಕಮಲ ಮಾಡುವ ಮೂಲಕ ಹಿಂಬಾಗಿಲಿನಿಂದ ಬಂದು ತರಾತುರಿಯಲ್ಲಿ ಸಿಎಂ ಆದ ಯಡಿಯೂರಪ್ಪ, ಮಂತ್ರಿಮಂಡಲ ರಚನೆ ಮಾಡದೆ ಇರುವುದರಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ಹಿನ್ನೆಡೆಯಾಗಿದೆ ಎಂದು ಶಾಸಕರು, ಇದೇ ಮೊದಲಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೇ ಜರುಗುವಂತಾಗಿದೆ ಎಂದು ಕುಟುಕಿದರು. ನೆರೆ ಹಾವಳಿ ಪರಿಹಾರವಾಗಿ ಕಲಬುರಗಿ ಜಿಲ್ಲೆಗೆ ರೂ ಐದು ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ, ತೀವ್ರ ಹಾನಿಗೊಳಗಾಗಿರುವ ಚಿತ್ತಾಪುರ ತಾಲೂಕನ್ನು ಹಾನಿಗೊಳಗಾದ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿದ್ದು ಅನ್ಯಾಯದ ಪರಮಾವಧಿಯಾಗಿದೆ ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಚಿತ್ತಾಪುರದಲ್ಲಿ ನಡೆದ ಇತ್ತೀಚಿನ ಘಟನೆಯನ್ನು ಉಲ್ಲೇಖಿಸಿದ ಶಾಸಕರು ಇಂತಹ ಘಟನೆಗಳು ಸಾಮರಸ್ಯ ಹಾಳು ಮಾಡುತ್ತವೆ. ನಾನು ಯಾರ ಹೆಸರನ್ನು ಅಥವಾ ಪಕ್ಷದ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ. ಆದರೆ ಇಂತಹ ಘಟನೆಗಳನ್ನು ಪ್ರೇರೆಪಿಸುವ ಶಕ್ತಿಗಳನ್ನು ಯಾವುದೇ ಮುಲಾಜಿಲ್ಲದೇ ದಮನ ಮಾಡಲಾಗುವುದು. ಈ ಕುರಿತು ಪೊಲೀಸರು ಕಟ್ಟುನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪುನರುಚ್ಚರಿಸಿದರು. ಇತ್ತೀಚಿಗೆ ಪತ್ರಿಕೆಗಳಲ್ಲಿ ವರದಿಯಾದಂತೆ, ಚಿತ್ತಾಪುರ ಪಟ್ಟಣದಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳಲ್ಲಿ ಲಕ್ಷಾಂತರ ಅವ್ಯವಹಾರ ನಡೆದ ಬಗ್ಗೆ ನನ್ನ ಗಮನಕ್ಕೆ ಈ ಮೊದಲೇ ಬಂದಿತ್ತು. ಆ ಕುರಿತು ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಚಿತ್ತಾಪುರ ನಾಗರಿಕರ ಪರವಾಗಿ ವೈಯಕ್ತಿಕವಾಗಿ ರೂ ಎರಡು ಲಕ್ಷ ಗಳನ್ನು ಸಿಎಂ ಪರಿಹಾರ ನಿಧಿಗೆ ನಾನು ದೇಣಿಗೆ ನೀಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ್ ಪಾಟೀಲ್, ಭೀಮಣ್ಣ ಸಾಲಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೇರಿದಂತೆ ಹಲವರಿದ್ದರು.