ಶರಣರ ನಿಲುವಿನಲ್ಲಿ ಸ್ವಾತಂತ್ರ್ಯ

0
161

ಮನೆ ನೋಡಾ ಬಡವರು; ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು
ಕೂಡಲ ಸಂಗನ ಶರಣರು ಸ್ವತಂತ್ರ ಧೀರರು

ಶರಣರ ವ್ಯಕ್ತಿತ್ವ ಕುರಿತು ಬಸವಣ್ಣನವರು ಬರೆದ ಅತ್ಯಂತ ಹೃದಯಸ್ಪರ್ಶಿ ವಚನವಿದು. ಎಲ್ಲರೂ ಕಾಯಕ ಮಾಡಬೇಕು, ಯಾರಿಗೂ ಬೇಡದೆ ಬದುಕುವ ಛಲ ಬೆಳೆಸಿಕೊಳ್ಳಬೇಕು. ಉಳ್ಳವರು ತಮ್ಮ ಸಂಪತ್ತನ್ನು ಶಿವನಿಧಿಗೆ ಒಪ್ಪಿಸಬೇಕು. ಬಡತನವನ್ನು ಸ್ವೀಕರಿಸುತ್ತ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡರು. ಬಡತನವನ್ನು ಆಹ್ವಾನಿಸುವಂತಹ ವೀರಗುಣ ಪಡೆದು ಭೌತಿಕ ಸುಖ ಲೋಲುಪತೆಯಿಂದ ದೂರ ಉಳಿದರು. ಹೀಗೆ ಭವಬಂಧನದಿಂದ ಬಿಡಿಸಿಕೊಂಡು ಸ್ವತಂತ್ರ ಧೀರರಾದರು. ಕಾಯಕ ಮತ್ತು ದಾಸೋಹ ಸಿದ್ಧಾಂತದ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ಶರಣರು ಕಲಿಸಿಕೊಟ್ಟರು.

ಸ್ವಾತಂತ್ರ್ಯ ಎನ್ನುವುದು ಯಾರೂ ಕೊಡುವಂಥಹದ್ದಲ್ಲ. ಇದನ್ನು ಯಾರೂ ಕೊಡಲಿಕ್ಕೆ ಕೂಡ ಬರುವುದಿಲ್ಲ. ಅದು ನಮ್ಮೊಳಗೆ ಸೃಷ್ಟಿಯಾಗಬೇಕು. ಅದು ನಮ್ಮೊಳಗೆ ಸೃಷ್ಟಿಯಾಗಬೇಕಾದರೆ ಸ್ವಾಭಿಮಾನಿಗಳಾಗಿ ಬದುಕಬೇಕು. ಸ್ವಾಭಿಮಾನಿಯಾಗಿ ಬದುಕಬೇಕಾದರೆ ಕಾಯಕ ಮಾಡುತ್ತ ಯಾರಿಗೂ ಬೇಡದೆ ಬದುಕುವ ಛಲ ಬೆಳೆಸಿಕೊಳ್ಳಬೇಕು. ಬೇಡುವ ಸಂಸ್ಕೃತಿಯಿಂದ ಕೊಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಸ್ವಾಭಿಮಾನದ ಸಮಾಜ ನಿರ್ಮಾಣವಾಗಲು ಸಾಧ್ಯ.

Contact Your\'s Advertisement; 9902492681

ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮನ ಮುಂದಿಟ್ಟು
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾದಿ ಬಂದಡೆ ನರಳು, ಬೇನೆ ಬಂದಡೆ ಒರಲು
ಸಾವು ಬಂದರೆ ಸಾಯಿ, ಇದಕ್ಕಾ ದೇವರ ಹಂಗೇಕೆ
ಭಾಪು ಲದ್ದೆಯ ಸೋಮಾ.

ಯಾವುದೇ ಕಾಯಕವಾದರೂ ಮನಸ್ಸುಕೊಟ್ಟು ಮಾಡು. ಕಾಯಕದಿಂದ ಬಂದದ್ದನ್ನು ದಾಸೋಹಂ ಭಾವದಿಂದ ಶರಣ ಸಂಕುಲಕ್ಕೆ (ಗುರು, ಲಿಂಗ, ಜಂಗಮ)ಅರ್ಪಿಸು. ಅರ್ಪಿಸಿದ ನಂತರ ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸು. ರೋಗ ಬಂದರೆ ನರಳು, ನೋವಾದರೆ ಅರಚು, ಸಾವು ಬಂದರೆ ಸಾಯಿ ಇದಕ್ಕೆ ಆ ದೇವರ ಹಂಗೇಕೆ ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸುತ್ತಾನೆ. ಆತ್ಮಗೌರವ, ಕಾಯಕನಿಷ್ಠೆ ಶರಣ ಸಂಕುಲಕ್ಕೆ ನಿಷ್ಠೆ. ಹೀಗಾಗಿ ದೇವರ ಹಂಗಿನಲ್ಲಿ ಕೂಡ ಇರಬಾರದು ಎಂದು ಹೇಳುತ್ತಾರೆ. ದುಡಿಯುವುದು ಸ್ವಾಭಿಮಾನದ ಪ್ರತೀಕ. ಬೇಡುವುದು ಅವಮಾನದ ಪ್ರತೀಕ ಎಂದು ಆತ ಸೂಚಿಸುತ್ತಾನೆ.

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನಿನೊಮ್ಮೆ ಜಡಿದೊಮ್ಮೆ ನುಡಿಯದಿರ
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥ

ದೇವರು ನಿರಾಕಾರವಾಗಿದ್ದಾನೆ. ಹಸಿವು ತೃಷೆಗಳು ಆತನ ಬಳಿ ಸುಳಿಯಲಾರವು. ಆದರೆ ಜನ ಲೌಕಿಕ ಜಗತ್ತಿನಲ್ಲಿದ್ದಾರೆ. ಅವರಿಗೆ ಹಸಿವು ನೀರಡಿಕೆಗಳಾಗುತ್ತವೆ. ಬಡವರಿಗಂತೂ ಹೊಟ್ಟೆ ತುಂಬಿಸಿಕೊಳ್ಳವುದೇ ದೈನಂದಿನ ಸಮಸ್ಯೆಯಾಗಿರುತ್ತದೆ. ಹೊಟ್ಟೆಪಾಡಿಗಾಗಿ ಕೆಲವರು ಸುಳ್ಳು ಹೇಳುವುದು ಸಹಜವಾಗಿದೆ. ಕಡು ಬಡವರ ಪರವಾದ ಧ್ವನಿಯಾಗಿ ದೇವರನ್ನೇ ಪ್ರಶ್ನಿಸುವ ಜೇಡರ ದಾಸಿಮಯ್ಯನವರು, ಹಾಗಾದರೆ ನಿನೊಮ್ಮೆ ಒಡಲುಗೊಂಡು ನೋಡು ಆಗ ನಿನಗೇ ತಿಳಿಯುತ್ತದೆ ಎಂದು ದೇವರೊಂದಿಗೆ ದುಖಿಃತರ ಪರವಾಗಿ ವಾಗ್ವಾದಕ್ಕಿಳಿಯುತ್ತಾರೆ. ದೇವರ ಜೊತೆ ಇಷ್ಟೊಂದು ತಕರಾರು ತೆಗೆಯುವ ಅದಮ್ಯ ಶಕ್ತಿಯುಳ್ಳ ದಾಸಿಮಯ್ಯನವರು “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನ್ನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ?’ ಎಂದು ದೇವರನ್ನು ಕೊಂಡಾಡುತ್ತಾರೆ.

ಲಂಚ ವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ, ನೀವಿಕ್ಕಿದ ಬಿಕ್ಷೆದಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭು ಜಕ್ಕೇಶ್ವರಾ

ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಸಮಾಜ ಹಾಗೂ ಅಧಿಕಾರದ ಹೆಸರಿನಲ್ಲಿ ಭ್ರಷ್ಟಚಾರ ತಾಂಡವ ನೃತ್ಯ ನಡೆಸಿರುವ ಈ ಸಂದರ್ಭದಲ್ಲಿ ಕಸಗುಡಿಸುವ ಸತ್ಯಕ್ಕಳ ಈ ವಚನ ನಮಗೆ ಮಾದರಿಯಾಗಬೇಕಿದೆ. ಶರಣ ಸಂಕುಲದ ಕಾಯಕ ಜೀವಿಗಳು ಸ್ವತಂತ್ರರು. ಕಾಯಕದ ಮಹತ್ವವನ್ನು ಅರಿತವರ ಸ್ವಾವಲಂಬಿ ಬದುಕು ಆನಂದವಾಗಿರುತ್ತದೆ. ಪರಮಾತ್ಮನಲ್ಲಿ ಮತ್ತು ಕಾಯಕದಲ್ಲಿ ಅಚಲವಾದ ನಂಬಿಕೆ ಇರುವವರಿಗೆ ನಾಳಿನ ಭಯ ಇರುವುದಿಲ್ಲ. ಪರಿಶುದ್ಧ ಬದುಕಿನಲ್ಲಿ ಸ್ವಾತಂತ್ರ್ಯ ತನ್ನಿಂದ ತಾನೆ ನೆಲೆಗೊಳ್ಳಲು ಸಾಧ್ಯ ಎಂಬುದನ್ನು ಹೇಳುವ ಮೂಲಕ ನಮ್ಮೊಳಗಿನ ಆತ್ಮಶಕ್ತಿಯನ್ನು ಜಾಗೃತಗೊಳಿಸುತ್ತಾಳೆ.

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲ ಸಂಗಮ ದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ತನ್ನ ಒಡ ಹುಟ್ಟಿದ ಅಕ್ಕನಾಗಮ್ಮಳಿಗೆ ಧರ್ಮ ಸಂಸ್ಕಾರ ನೀಡಲಾರೆನೆಂದ ಧರ್ಮವನ್ನೇ ತಿರಸ್ಕರಿಸಿ, ಹುಟ್ಟಿದ ಮನೆಯಿಂದಲೇ ಸ್ತ್ರೀ ಸ್ವಾತಂತ್ರ್ಯದ ಕಹಳೆಯನ್ನೂದಿದವರು. ಸ್ತ್ರೀ ಸಮಾನತೆಗಾಗಿ ಮನೆ ಬಿಟ್ಟು ಬಂದ ಬಸವಣ್ಣ ದೇವರ ಕುರುಹಾಗಿ ಇಷ್ಟಲಿಂಗವನ್ನು ಆವಿಷ್ಕರಿಸಿದರು. ಉಳ್ಳವರು ಕಟ್ಟಿಸುವ ಮತ್ತು ಪ್ರವೇಶಿಸುತ್ತಿದ್ದ ದೇವಾಲಯಗಳನ್ನು ನೋಡಿ ಇಲ್ಲದವರು ಮತ್ತು ಅಸ್ಪೃಶ್ಯರು ಒಂದಿಲ್ಲ ಒಂದು ದಿನ ಅಳಿಯುವ, ನಾಶವಾಗುವ ದೇವಾಲಯವನ್ನು ನೋಡಿ ವ್ಯಥೆ ಪಡದೆ ಜಂಗಮ ರೂಪು ಪಡೆಯಬೇಕೆಂಬ ಆತ್ಮಾಭಿಮಾನವನ್ನು ತುಂಬಿದರು.

ಕೆರೆ ಹಳ್ಳ ಬಾವಿಗಳು ಮೈದೆಗೆದರೆ
ಗುಳ್ಳೆ ಗೊರಚೆ, ಚಿಪ್ಪುಗಳು ಕಾಣಬಹುದು
ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು
ಕೂಡಲ ಸಂಗನ ಶರಣರು ಮನದೆರೆದು
ಮಾತನಾಡಿದರೆ ಲಿಂಗವೇ ಕಾಣಬಹದು

ಬಸವಣ್ಣನವರ ಈ ವಚನವು ಅಂದಿನ ಶರಣರ ನಿಲುವು ಏನಿತ್ತು ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಸ್ವಾತಂತ್ರ್ಯ, ಸ್ವಾವಲಂಬನೆ ಇಲ್ಲದ ಆ ಗಾಢಾಂಧಕಾರದ ಕಾಲದಲ್ಲಿ ಸಕಲ ಜೀವಾತ್ಮರಿಗೆ ಲೇಸು ಬಯಸಿದ ಶರಣರು ನ ಭೂತೋ ನ ಭವಿಷತ್ ಎನ್ನುವಂತಹ ಬಹು ದೊಡ್ಡ ಆಂದೋಲನವನ್ನೇ ಹುಟ್ಟು ಹಾಕಿದರು.

ವಿಭಿನ್ನ ಜಾತಿ, ವರ್ಗ ಲಿಂಗಗಳಿಗೆ ಸೇರಿದ ಈ ಹೊಸ ಚಳವಳಿಯ ಹರಿಕಾರರು ಶರಣರು. ಅವರಲ್ಲಿ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ, ಚನ್ನಬಸವಣ್ಣ, ದಾಸಿಮಯ್ಯ ಮುಂತಾದವರು ಪ್ರಮುಖರು. ಕಲ್ಯಾಣದ ಅರಸ ಬಿಜ್ಜಳನ ಆಸ್ಥಾನಿಕನಾಗಿದ್ದಬಸವಣ್ಣನ ಮಹಾಮನೆಯಲ್ಲಿ ಬಳ್ಳಿಗಾವಿಯಿಂದ ಬಂದ ಅಲ್ಲಮ, ಉಡುತಡಿಯಿಂದ ಬಂದ ಅಕ್ಕ ಹೀಗೆ ನಾಡಿನ ವಿವಿಧ ಮೂಲೆಗಳಿಂದ ಶರಣರು, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಅಹರ್ನಿಷಿ ಪ್ರಯೋಗದಲ್ಲಿ ತೊಡಗಿದ್ದರು.

ಶರಣರ ಈ ಆಂದೋಲನದ ಎದುರಿಗೆ ಬಿಜ್ಜಳನ ರಾಜ್ಯಶಕ್ತಿ ತತ್ತರಿಸಿ ಹೋಯಿತು. ನಾವಿಂದು ರಾಜಕೀಯವಾಗಿ, ಸಾಮಾಜಿಕವಾಗಿ ಸ್ವಾತಂತ್ರ್ಯವಾಗಿರಬಹುದು. ಆದರೆ ೬೯ ವರ್ಷಗಳಾದರೂ ಮಾನಸಿಕ ಗುಲಾಮರಾಗಿಯೇ ಬಾಳುತ್ತಿದ್ದೇವೆ. ಶರಣರು ಅಂದು ಮಾಡಿದ ಅಂತರಂಗ-ಬಹಿರಂಗ ಶುದ್ಧಿಯೇ ನಿಜವಾದ ಸ್ವಾತಂತ್ರ್ಯವಾಗಿದೆ. “ನುಡಿ ಮೇಲು ನಡೆ ಅಧಮವಾದಲ್ಲಿ ಅದೇ ಬಿಡುಗಡೆಯಿಲ್ಲದ ಹೊಲೆ’ ಎಂದು ಮಾದಾರ ಚನ್ನಯ್ಯ ಹೇಳುತ್ತಾನೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿವರು ಕೇವಲ ನೂಲಿನ ಎಳೆಯಿಂದಲೇ (ಚರಕ) ಇಡೀ ದೇಶದ ಜನರನ್ನು ತಮ್ಮತ್ತ ಆಕರ್ಷಿಸಿ ಕಲ್ಲೆದೆಯ ಬ್ರಿಟಿಷ್‌ರಿಂದ ಭಾರತವನ್ನು ಬಂಧಮುಕ್ತಗೊಳಿಸಿದರೆ, ಶರಣ ಸಂಕುಲದ ನೇತಾರನಾಗಿದ್ದ ಬಸವಣ್ಣನವರು ಇಷ್ಟಲಿಂಗವೆಂಬ ಬುಲ್ಡೋಜರ್ ಮೂಲಕ ಸಮಾಜದಲ್ಲಿದ್ದ ಜಾತಿಯತೆ, ಅಸಮಾನತೆ, ಅಸ್ಪೃಶ್ಯತೆ, ಮೇಲು-ಕೀಳು ಮುಂತಾದ ತರತಮ ಭಾವನೆಗಳನ್ನು ಕಿತ್ತು ಹಾಕಿ ಸರ್ವ ಸ್ವತಂತ್ರ ನಿಲುವುಗಳನ್ನು ಸಮಾಜದಲ್ಲಿ ನೆಲೆಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here