ಕಲಬುರಗಿ: ನಗರದಲ್ಲಿ ಮೂರು ಪ್ರಮುಖ ನಾಯಕರು ನಾಮಪತ್ರ ಸಲ್ಲಿಸಿದರು.
ಕಲಬುರಗಿ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ (ಚಂದು ಪಾಟೀಲ), ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ (ಅಪ್ಪುಗೌಡ) ನಾಮಪತ್ರ ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೊಡಕಾಗಬಾರದೆಂದು ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಪ್ರತ್ಯೇಕ ವ್ಯವಸ್ಥೆ ಮಾಡಿತ್ತು.ಈ ಮೂರು ಜನ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದರಿಂದ ನಗರದಾದ್ಯಂತ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಯಿತು.
ನಗರದ ಪ್ರಮುಖ ರಸ್ತೆಗಳು ಆಯಾ ಪಕ್ಷದ ಕಾರ್ಯಕರ್ತರಿಂದ ತುಂಬಿಕೊಂಡಿದ್ದರವು.ತಮ್ಮ ನಾಯಕರ ಪರ ಜಯಘೋಷ, ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರಸ್ತೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಜನರು ಜಮಾಯಿಸಿದ್ದರು.
ಕಲಬುರಗಿಯ ಈ ಮೂರುವರು ನಾಯಕರು ತಮ್ಮ ಬೆಂಬಲಿಗರೊಂದಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಮೇಲಾಗಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.