ಶರಣಬಸವೇಶ್ವರರ ಲೀಲೆಗಳು ನಿರಂತರ: ಡಾ.ಎಸ್.ಎಸ್.ಪಾಟೀಲ

0
65

ಮಹಾದಾಸೋಹಿ ಶರಣಬಸವೇಶ್ವರರ ಶಿವಲೀಲೆಗಳು ನಿರಂತರವಾಗಿ ಈಗಲೂ ನಡೆಯುತ್ತಿವೆ ಎಂದು ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದ ಆಂಗ್ಲ ಪ್ರಾಧ್ಯಾಪಕ ಡಾ.ಎಸ್.ಎಸ್.ಪಾಟೀಲರು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಹಸಿವೆಯಿಂದ ಬಳಲುತ್ತಿದ್ದ ಮುಸಲ್ಮಾನ ಮುದುಕ ಶರಣರ ದಾಸೋಹ ಮನೆಗೆ ಬಂದ. ಅಲ್ಲಿ ಬಹಳ ಜನರು ಪ್ರಸಾದ ಪಡೆಯುತ್ತಿದ್ದರು. ಎಲ್ಲರ ಎದೆಯ ಮೇಲೆ ಲಿಂಗ, ಹಣೆಯ ಮೇಲೆ ವಿಭೂತಿ. ಆಗ ವಿಚಾರ ಮಾಡಿ ಆತ ಅಲ್ಲಿಯೇ ಇದ್ದ ಬದನೆಕಾಯಿಯೊಂದು ತೆಗೆದುಕೊಂಡು ಲಿಂಗದಾಕಾರ ಮಾಡಿ ಕೈಯೊಳಗೆ ಹಿಡಿದು ಮಹಾಮನೆಯೊಳಗೆ ಬಂದ. ಅಲ್ಲಿ ನಿಂತ ಶರಣರ ದೃಷ್ಟಿ ಆತನ ಕೈಯಲ್ಲಿರುವ ಬದನೆಕಾಯಿ ಮೇಲೆ ಬಿದ್ದು ಅದು ಲಿಂಗವಾಯಿತ್ತಲ್ಲದೆ, ಆತನ ಹಸಿವು ಕಡಿಮೆಯಾಗುತ್ತದೆ. ಅವನು ಶರಣರ ಪಾದ ಗಟ್ಟಿಯಾಗಿ ಹಿಡಿಯುತ್ತಾನೆ. ಆಗ ಶರಣರು ಅವನ ಹಣೆಯ ಮೇಲೆ ವಿಭೂತಿ ಹಚ್ಚಿ ಅವನಿಗೆ ಹರಸಿ ಪ್ರಸಾದ ಮಾಡಿಸುತ್ತಾರೆ. ಹೀಗೆ ಶರಣರು ಬದನೆಕಾಯಿಯನ್ನು ಲಿಂಗವನ್ನಾಗಿ ಮಾಡಿದರು.

ಆಗರ್ಭ ಶ್ರೀಮಂತನೊಬ್ಬನಿಗೆ ಮೂರು ಮಕ್ಕಳಿದ್ದು ಮೂರು ಮಕ್ಕಳು ಮೂಕರಾಗಿದ್ದರು. ಆ ಶ್ರೀಮಂತನಿಗೆ ಮತ್ತು ಆತನ ಹೆಂಡತಿಗೆ ಇಡೀ ಬದುಕೇ ಬರಡು ಭೂಮಿಯಾಗಿತ್ತು. ತನ್ನ ಮೂರು ಮಕ್ಕಳನ್ನು ಕರೆದುಕೊಂಡು ದಂಪತಿಗಳು ಶರಣಬಸವರ ಹತ್ತಿರ ಬಂದರು. ಆಗ ಶರಣರು ’ ಏಳು ರಂಜಣಗಿ ದುಡ್ಡು ಹೊನ್ನ ಗಳಿಸಿಟ್ಟಿದ್ದಿ ಆದರೆ ಬಡವರನ್ನು ಸುಲಿದು ಸಾಲಕೊಟ್ಟು ಸಂಸಾರ ಹಾಳು ಮಾಡಿದ್ದಿ. ನಿನ್ನ ಕೆಟ್ಟಗುಣಕ್ಕೆ ಆ ಪರಮಾತ್ಮ ನಿನ್ನ ಸಂಸಾರ ಹಾಳು ಮಾಡಿದ್ದಾನೆ’ ಎಂದು ಹೇಳಿದಾಗ ಆತ ತಕ್ಷಣವೇ ಎದ್ದು ನಿಂತು ’ ಅದನ್ನೆಲ್ಲ ತಮ್ಮ ದಾಸೋಹಕ್ಕೆ ಒಪ್ಪಿಸುತ್ತೇನಪ್ಪಾ’ ಎಂದು ತಲೆ ಬಾಗುತ್ತಾನೆ. ಆಗ ಶರಣರು ’ ನಿನ್ನ ಆ ಪಾಪಿ ಹಣ ದಾಸೋಹಕ್ಕೆ ಸಲ್ಲುವುದಿಲ್ಲ. ಯಾರಿಂದ ಅದನ್ನು ಪಡೆದುಕೊಂಡಿದ್ದಿಯೊ ಅವರಿಗೆ ಹಂಚಿಬಿಡು’ ಎಂದು ಹೇಳುತ್ತಾರೆ. ಆ ಮಕ್ಕಳ ತಲೆಯ ಮೇಲೆ ಶರಣರು ಕೈಯಿಟ್ಟ ತಕ್ಷಣವೇ ಮಕ್ಕಳು ಮಾತನಾಡಲು ಪ್ರಾರಂಭಿಸುತ್ತಾರೆ. ಸಾಹುಕಾರ ಶರಣರ ಆದೇಶದಂತೆ ಎಲ್ಲವನ್ನು ಹಂಚಿ ಶರಣರ ಭಕ್ತನಾಗಿ ಬದುಕುತ್ತಾನೆ.

ಒಂದು ಸಲ ಕಲಬುರ್ಗಿಯಲ್ಲಿರುವ ಒಂದು ಕುಟುಂಬಕ್ಕೆ ಹಣದ ಹುಚ್ಚು ಬಡಿದುಕೊಂಡಿರುತ್ತದೆ. ಆ ಕುಟುಂಬದ ಸೊಸೆಗೆ ತೌರಿನಿಂದ ಹಣ ತರಬೇಕೆಂದು ಹಿಂಸಿಸುತ್ತಿರುತ್ತಾರೆ. ಆಕೆ ಒಂದು ಸಲ ತೌರಿನಿಂದ ಬರಿಗೈಯಲ್ಲಿ ಬಂದಾಗ ಹೊಡೆದು ಮನೆಯಲ್ಲಿರುವ ಬಾವಿಯೊಳಗೆ ಆಕೆಯನ್ನು ನಿರ್ದಯಿಗಳಾಗಿ ನೂಕಿ ಬಿಡುತ್ತಾರೆ. ಈ ವಿಷಯ ಶರಣರಿಗೆ ತಿಳಿದು ಅವರು ಭಕ್ತರ ಕೈಯೊಳಗೆ ವಿಭೂತಿ ಕೊಟ್ಟು ಬಾವಿಯೊಳಗೆ ಹಾಕಲು ತಿಳಿಸುತ್ತಾರೆ. ಪೋಲಿಸರಿಗೆ ದೂರು ಕೊಡಲಾಗುತ್ತದೆ. ಬಾವಿಯೊಳಗೆ ಎಲ್ಲಿ ನೋಡಿದರೂ ಅವಳು ಕಾಣಿಸುವುದಿಲ್ಲ, ಅವಳ ಶವ ಇರುವುದಿಲ್ಲ. ಅವಳ ಮೈದುನ ನೀರು ಕುಡಿಯಲೆಂದು ಮನೆಯೊಳಗೆ ಹೋದಾಗ ಅವಳು ಅಡುಗೆ ಮಾಡುತ್ತಿರುತ್ತಾಳೆ. ಹಾಗೆಯೇ ಓಡಿ ಹೋಗಿ ಹೊರಗಿರುವ ಎಲ್ಲರನ್ನು ತಿಳಿಸಿದಾಗ ಅವರು ಒಳ ಬಂದು ನೋಡುತ್ತಾರೆ. ಅವಳು ಶಾಂತವಾಗಿ ಏನು ಗೊತ್ತಿರದ ಹಾಗೆ ಅಡುಗೆ ಮಾಡುತ್ತಿರುತ್ತಾಳೆ. ಅವರಿಗೆ ತಮ್ಮ ತಪ್ಪು ಅರಿವಾಗಿ ಶರಣರಲ್ಲಿ ಬಂದು ಶರಣಾಗುತ್ತಾರೆ. ಹೀಗೆ ಶರಣರ ಲೀಲೆಗಳು ಅಪಾರವಾಗಿದ್ದು ಜನಮಾನಸದಲ್ಲಿ ನೆಲೆ ನಿಂತಿವೆ ಎಂದು ಹೇಳಿದರು.

ಡಾ.ಎಸ್.ಎಸ್.ಪಾಟೀಲ, ಪ್ರಾಧ್ಯಾಪಕ 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here