ಕಲಬುರಗಿ: ವಿಧಾನಸಭೆ ಚುನಾವಣೆಯ ಮತದಾನವು ಇದೇ ಮೇ 10 ರಂದು ಬೆಳಗಿನ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಚುನಾವಣೆ ನಿಯಮದ ಪ್ರಕಾರ ಯಾವುದೇ ಪಕ್ಷದವರು ಹಾಗೂ ಅಭ್ಯರ್ಥಿಗಳು ಮತದಾರರನ್ನು ಕ್ಷೇತ್ರದ ಹೊರಗಿನಿಂದ ಅಥವಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಮಾಡಲು ವಾಹನಗಳಲ್ಲಿ ಕರೆದುಕೊಂಡು ಬರುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ಯಾವುದೇ ಮತದಾರರನ್ನು ಬಸ್ಸು ಅಥವಾ ಇತರೆ ವಾಹನಗಳಲ್ಲಿ ಕರೆದುಕೊಂಡು ಬರುವುದು ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಕಾಯ್ದೆ ಅನುಸಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಮತದಾರರು ಯಾವುದೇ ಆಸೆ ಮತ್ತು ಆಮಿಷ, ಪ್ರಭಾವ, ಬೆದರಿಕೆಗೆ ಮಣಿಯದೇ ಸ್ವ-ಇಚ್ಛೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ಮನವಿ ಮಾಡಿದ್ದಾರೆ.