ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು ಇದೇ ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಂ ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶ್ರೀಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯ ಡಾ. ಶ್ರೀ ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ ಉದ್ಘಾಟಿಸುವರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡುವರು. ನವದೆಹಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮುಖ್ಯ ಅತಿಥಿಗಳಾಗಿರುವರು.
ಇದೇ ಸಂದರ್ಭದಲ್ಲಿ ನಿವೃತ್ತ ಮೇಷ್ಟ್ರು ನಾಗಪ್ಪ ಮಾಸ್ಟರ್ ಮುನ್ನೂರ್ ಸ್ಮರಣಾರ್ಥ ಇಬ್ಬರು ಮಹಿಳೆಯರಿಗೆ ಸ್ವಾವಲಂಬಿ ಬದುಕಿಗಾಗಿ ಕಳೆದ 16 ವರ್ಷಗಳಿಂದ ನೀಡಲಾಗುತ್ತಿರುವ `ಹೊಲಿಗೆ ಮಷಿನ್ ವಿತರಣೆ’ ಈ ವರ್ಷವೂ ಮಾಡಲಾಗುವುದು ಎಂದು ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಅಮ್ಮ ಪ್ರಶಸ್ತಿ-24 ಪುರಸ್ಕøತರು : ಕಾವ್ಯ- ವಿದ್ಯಾರಶ್ಮಿ ಪೆಲತ್ತಡ್ಕ ಮತ್ತು ಪ್ರಭಾವತಿ ದೇಸಾಯಿ, ಕಥೆ-ವೀರೇಂದ್ರ ರಾವಿಹಾಳ್ ಮತ್ತು ಪೂರ್ಣಿಮಾ ಮಾಳಗಿಮನಿ, ಕಾದಂಬರಿ-ದ್ವಾರನಕುಂಟೆ ಪಾತಣ್ಣ ಮತ್ತು ಗುರುಪ್ರಸಾದ ಕುಂಟಲಗೆರೆ, ಸಂಕೀರ್ಣ- ಡಾ.ಪರ್ವಿನ ಸುಲ್ತಾನಾ ಮತ್ತು ಡಾ.ಪ್ರಕಾಶ ಭಟ್, ಲಲಿತ ಪ್ರಬಂಧ ಮತ್ತು ಅನುವಾದ- ಡಾ.ಎಚ್.ಎಸ್.ಸತ್ಯನಾರಾಯಣ ಮತ್ತು ಮಂಜುನಾಥ ಚಾಂದ್ ಅವರು ಆಯ್ಕೆಯಾಗಿದ್ದು, ನ.26 ರಂದು ಪ್ರಶಸ್ತಿ ಸ್ವೀಕರಿಸುವರು.
ವಿಶೇಷ ಪುರಸ್ಕಾರ : `ಅಮ್ಮ ಪ್ರಶಸ್ತಿ’ಯ `ವಿಶೇಷ ಮಾಧ್ಯಮ ಪುರಸ್ಕಾರ’ವನ್ನು ಶಿವಾನಂದ ತಗಡೂರು ಹೇಳಿದ `ಕೋವಿಡ್ ಕಥೆಗಳು’ ಕೃತಿಗೆ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಾವನಾತ್ಮಕ ಸಂಬಂಧ ಬೆಸೆದ ಪ್ರಶಸ್ತಿ; ಪತ್ರಕರ್ತ-ಲೇಖಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ಪ್ರಶಸ್ತಿಯೇ `ಅಮ್ಮ ಪ್ರಶಸ್ತಿ’. ಈ ಪ್ರಶಸ್ತಿಯು ಇಂದು ಸೇಡಂ ಗಡಿ ದಾಟಿ, ಕಲಬುರಗಿ ಗಡಿ ದಾಟಿ, ರಾಜ್ಯದ ಅಗಲಕ್ಕೂ ವ್ಯಾಪಿಸಿದೆ. ಅಮ್ಮ ಎನ್ನುವ ಹೆಸರೇ ಹಲವರಿಗೆ ಈ ಪ್ರಶಸ್ತಿಯ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವ ಹಾಗೆ ಮಾಡಿದೆ. ಇದು ಮಹಿಪಾಲರೆಡ್ಡಿ ಅವರ ಅಮ್ಮನ ಹೆಸರಿನಲ್ಲಿ ಕೊಡಮಾಡುತ್ತಿರುವ ಪ್ರಶಸ್ತಿಯಾದರೂ, ಇದು ಎಲ್ಲ ಅಮ್ಮಂದಿರನ್ನು ಗೌರವಿಸುವ ಪ್ರಶಸ್ತಿ. ಇಂತಹ ಪ್ರಶಸ್ತಿಗೆ ಈಗ ಇಪ್ಪತ್ನಾಲ್ಕನೆಯ ವರ್ಷದ ಸಂಭ್ರಮ.