ಸುರಪುರ: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ನಾಶ ಮಾಡುವುದಾಗಿ ಹೇಳಿಕೆ ನೀಡಿರುವ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ಪೊಲೀಸ್ ಠಾಣೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ,ಮಣಿಕಂಠ ರಾಠೋಡ ಮೇಲೆ ಈಗಾಗಲೇ 45 ವಿವಿಧ ರೀತಿಯ ಅಪರಾಧ ಪ್ರಕರಣಗಳಿವೆ ಅಂತವನಿಗೆ ಬಿಜೆಪಿ ಟಿಕೇಟ್ ನೀಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ನೀಡಿದೆ.ಅಂತಹ ಹಿನ್ನೆಲೆಯುಳ್ಳ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ನರೇಂದ್ರ ಮೋದಿಯವರು,ಅಮಿತ್ ಷಾ ನಂತವರು ಬಂದಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ನಾಶ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿರುವ ಇವನ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಚುನಾವಣಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಚುನಾವಣೆ ಮುಗಿದ ನಂತರದಲ್ಲಿ ನಮ್ಮ ಸಂಘಟನೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಚುನಾವಣಾಧಿಕಾರಿಗಳಿಗೆ ಬರೆದ ಮನವಿಯನ್ನು ಸುರಪುರ ಡಿವೈಎಸ್ಪಿ ನ್ಯಾಮಿಗೌಡ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಾನು ಗುರಿಕಾರ,ರವಿಚಂದ್ರ ಬೊಮ್ಮನಹಳ್ಳಿ,ಮಾನಪ್ಪ ಕಟ್ಟಿಮನಿ,ನಿಂಗಣ್ಣ ಗೋನಾಲ,ಜೆಟ್ಟೆಪ್ಪ ನಾಗರಾಳ,ಮಾನಪ್ಪ ಕರಡಕಲ್,ಮಾನಪ್ಪ ಬಿಜಾಸಪುರ,ಹಣಮಂತ ಕುಂಬಾರಪೇಟೆ,ಮೂರ್ತಿ ಬೊಮ್ಮನಹಳ್ಳಿ,ವೀರಭದ್ರಪ್ಪ ತಳವಾರಗೇರ, ಬಸವರಾಜ ದೊಡ್ಮನಿ,ಖಾಜಾಹುಸೇನ್ ಗುಡಗುಂಟಿ,ಮಹೇಶ ಯಾದಗಿರಿ,ರಾಮಣ್ಣ ಬಬಲಾದಿ ಸೇರಿದಂತೆ ಅನೇಕರಿದ್ದರು.