ಕಲಬುರಗಿ: ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಕಾರಗೊಳ್ಳುವ ಕನಸು ಕಾಣಬೇಕು. ತನ್ಮೂಲಕ ಉನ್ನತ ಹಂತಕ್ಕೇರಿ ಸಾಧನೆ ತೋರಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಸಿ.ಬಿ.ಎಸ್.ಸಿ. ಪಠ್ಯಕ್ರಮದಲ್ಲಿ ಇಡೀ ಭಾರತ ದೇಶದಲ್ಲಿ 11ನೇ ರ್ಯಾಂಕ್ ಪಡೆದು ಕಲ್ಯಾಣ ನಾಡಿಗೆ ಕೀರ್ತಿ ತಂದು ಕೊಟ್ಟ ಇಶಾನ್ ಬುಕ್ಕೇಗಾರ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಗುರುವಾರ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಕ ಗಳಿಕೆಯೊಂದಿದ್ದರೆ ಮಾತ್ರ ಜೀವನ ಪರಿಪೂರ್ಣ ಅಲ್ಲ. ಉತ್ತಮ ವ್ಯಕಿತ್ವ್ತ ಬೇಕು. ಅಂಕದ ಜತೆಗೆ ವಿನಯವು ಬೇಕು. ನಾವು ದಿನ ನಿತ್ಯ ಕಲಿಯುತ್ತಲೇ ಇರಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗುತ್ತಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದರು.
ಗೌರವ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸಾಧಕ ವಿದ್ಯಾರ್ಥಿ ಇಶಾನ್ ಬುಕ್ಕೇಗಾರ, ನನ್ನ ಈ ಸಾಧನೆಗೆ ಶಿಕ್ಷಕರು, ತಂದೆ ತಾಯಿಗಳೇ ನಿಜ ಕಾರಣೀಕರ್ತರು. ಸತತವಾದ ಅಧ್ಯಯನ, ಏಕಾಗ್ರತೆಯೇ ಈ ಮಟ್ಟಕ್ಕೆ ಏರಲು ಕಾರಣವಾಯಿತು. ವಿದ್ಯಾರ್ಥಿಗಳಾದ ನಾವು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅಂದಾಗ ಮಾತ್ರ ನಾವು ಅಂದುಕೊಂಡಿದ್ದು ಸಾಧಿಸಲಿಕ್ಕೆ ಸಾಧ್ಯವಾಗುತ್ತದೆ ಎಂದರು.
ಸಂಶೋಧಕ ಮುಡುಬಿ ಗುಂಡೇರಾವ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ಬಾಬುರಾವ ಪಾಟೀಲ,ರಾಜಶೇಖರ ಮಾಂಗ್, ಮಾಲಾ ದಣ್ಣೂರ, ಮಾಲಿನಿ ಬುಕ್ಕೇಗಾರ, ಭುವನೇಶ್ವರಿ ಹಳ್ಳಿಖೇಡ, ಧರ್ಮಣ್ಣಾ ಹೆಚ್. ಧನ್ನಿ, ರಾಜೇಂದ್ರ ಮಾಡಬೂಳ, ಶಿವಾನಂದ ಪೂಜಾರಿ, ವಿನೋದ ಜೆನವೇರಿ, ಮಲ್ಲಿಕಾರ್ಜುನ ಕೋಟೆ, ಭೀಮಾಶಂಕರ ಪಾಟೀಲ ಕಣ್ಣಿ, ವೀರೇಶ ಪಾಟೀಲ, ವಿಶ್ವನಾಥ ತೊಟ್ನಳ್ಳಿ, ಹೆಚ್.ಎಸ್.ಬರಗಾಲಿ, ಎಸ್.ಎಂ.ಪಟ್ಟಣಕರ್, ವಿಜಯ ಪುರಾಣಿಕ್, ಸಿದ್ಧಲಿಂಗರೆಡ್ಡಿ ಹಣಮನಳ್ಳಿ, ಜಗದೀಶ ಮರಪಳ್ಳಿ, ರಾಜಶೇಖರ ಪಾಟೀಲ, ಸಾಯಬಣ್ಣಾ ಬೆಳಮ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.